ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿತ್ತು. ಅದರ ಬುಕಿಂಗ್ ನಾಳೆಯಿಂದ ಶುರುವಾಗಲಿದೆ.
ಅಧಿಕೃತವಾಗಿ ಆಗಸ್ಟ್ 24 ರಿಂದ ಬುಕಿಂಗ್ ಪ್ರಾರಂಭವಾಗುತ್ತಿದ್ದರೂ, ಕೆಲವು ಅಧಿಕೃತ ಡೀಲರ್ ಗಳು ನಾಳೆಯಿಂದಲೇ ಬುಕಿಂಗ್ ಗೆ ಅವಕಾಶ ಒದಗಿಸಿಕೊಡಲಿದ್ದಾರೆ. ಹೀಗಾಗಿ ರಿಲಯನ್ಸ್ ಮಳಿಗೆಗೆ ಹೋಗಿ ಬುಕಿಂಗ್ ಮಾಡುವುದು ಹೇಗೆ ಎಂದು ನೋಡೋಣ.
ಅಧಿಕೃತ ರಿಲಯನ್ಸ್ ಜಿಯೋ ಡೀಲರ್ ಗಳ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಜತೆಗಿರಲೇಬೇಕು. ನಿಮ್ಮಆಧಾರ್ ವಿವರಣೆಗಳನ್ನು ಸೆಂಟ್ರಲೈಸ್ಡ್ ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.
ಈ ಸಾಫ್ಟ್ ವೇರ್ ನಿಮಗೆ ಒಂದು ಟೋಕನ್ ನಂಬರ್ ನೀಡುತ್ತದೆ. ಈ ನಂಬರ್ ನ್ನು ಯಾವುದೇ ಕಾರಣಕ್ಕೂ ಕಳೆಯಬೇಡಿ. ಇದು ಫೋನ್ ನಿಮ್ಮ ಕೈ ಸೇರುವಾಗ ಅಗತ್ಯ ಬರುತ್ತದೆ. ನೆನಪಿಡಿ. ಒಬ್ಬರ ಆಧಾರ್ ಕಾರ್ಡ್ ಬಳಸಿ ಕೇವಲ ಒಂದು ಫೋನ್ ಪಡೆಯಬಹುದಾಗಿದೆ.