ನವದೆಹಲಿ : ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಟೆಲಿಕಾಂ ಕಂಪೆನಿಗಳಾದ ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ.
ಹೌದು. 2016ರಲ್ಲಿ ಜಿಯೋ ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದ ಹಿನ್ನಲೆಯಲ್ಲಿ ಗ್ರಾಹಕ ವಿರೋಧಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಜಿಯೋ ಟ್ರಾಯ್ ಗೆ ದೂರು ನೀಡಿತ್ತು. ಆದಕಾರಣ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳಿಗೆ 1,050 ಕೋಟಿ ರೂ., ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಇದೀಗ ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ವಿಚಾರದ ಬಗ್ಗೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿ, ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ ಎಂದು ತಿಳಿಸಿವೆ.