ನವದೆಹಲಿ: ಪ್ರಸ್ತುತ ಐಪಿಎಲ್‌ನ ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಟಿಕೆಟ್ ಪಡೆದಿವೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್‌ಜೈಂಟ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ (ಅಜೇಯ 108) ಮತ್ತು ಶುಭಮನ್ ಗಿಲ್ (ಅಜೇಯ 93) ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಗುಜರಾತ್ ಟೈಟನ್ಸ್ ತಂಡವು, 10 ವಿಕೆಟ್ ಅಂತರದ ಸುಲಭ ಜಯ ಸಾಧಿಸಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ, ಕೆ.ಎಲ್.ರಾಹುಲ್ ಸಿಡಿಸಿದ ಶತಕದ (ಅಜೇಯ 112 ರನ್) ಬಲದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್ ಗಳಿಸಿತು.
ಈ ಗುರಿ ಗುಜರಾತ್ ತಂಡಕ್ಕೆ ಸವಾಲೇ ಆಗಲಿಲ್ಲ. ಇನಿಂಗ್ಸ್ ಆರಂಭಿಸಿದ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್, ಎದುರಾಳಿಗೆ ವಿಕೆಟ್ ಬಿಟ್ಟುಕೊಡದೆ ಇನ್ನೂ 1 ಓವರ್ ಬಾಕಿ ಇರುವಂತೆಯೇ ತಮ್ಮ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಈ ಗೆಲುವಿನೊಂದಿಗೆ ಪಾಯಿಂಟ್ ಗಳಿಕೆಯನ್ನು 18ಕ್ಕೆ ಏರಿಸಿಕೊಂಡ ಗುಜರಾತ್ ತಂಡ, ಅಗ್ರಸ್ಥಾನದೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು. ಪಾಯಿಂಟ್ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (17) ಹಾಗೂ ಪಂಜಾಬ್ ಕಿಂಗ್ಸ್ (17) ತಂಡಗಳೂ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡವು.
ಇದಕ್ಕೂ ಮುನ್ನ ನಡೆದ ಇನ್ನೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 10 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತ್ತು.