ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪವರ್ ಏನೆಂದು ನಿನ್ನೆ ಎಲ್ಲಾ ತಂಡಗಳಿಗೂ ಮನವರಿಕೆಯಾಗಿರುತ್ತದೆ. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ಬ್ಯಾಟಿಂಗ್ ನಲ್ಲಿ ದೇವದತ್ತ್ ಪಡಿಕ್ಕಲ್ ಮನೋಹರ ಹೊಡೆತಗಳ ಮೂಲಕ ಕೆಕೆಆರ್ ವಿರುದ್ಧದ ಪಂದ್ಯವನ್ನು ಚಿಂದಿ ಉಡಾಯಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕೊತ್ತಾಗೆ 35 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ ಈ ಹಂತದಲ್ಲಿ ನಾಯಕ ಇಯಾನ್ ಮಾರ್ಗನ್ 30 ರನ್ ಗಳಿಸಿ ಕೊಂಚ ಚೇತರಿಕೆ ನೀಡಿದರು. ಆದರೂ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 84 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ ಸಿಬಿ ಪರ ಅದ್ಭುತ ಬೌಲಿಂಗ್ ನಡೆಸಿದ ಮೊಹಮ್ಮದ್ ಸಿರಾಜ್ 8 ರನ್ ನೀಡಿ 3 ವಿಕೆಟ್, ಯಜುವೇಂದ್ರ ಚಾಹಲ್ 2 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು. ಆರ್ ಸಿಬಿ ಬೌಲರ್ ಗಳೆಲ್ಲರೂ ಎದುರಾಳಿಗಳಿಗೆ ರನ್ ಗಳಿಸಲು ಪರದಾಡುವಂತೆ ಮಾಡಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿಗೆ ಎಂದಿನಂತೆ ದೇವದತ್ತ್ ಪಡಿಕ್ಕಲ್-ಏರಾನ್ ಫಿಂಚ್ ಜೋಡಿ ಉತ್ತಮ ಆರಂಭ ನೀಡಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಜೋಡಿ ನಂತರ ಉತ್ತಮ ಹೊಡೆತಗಳಿಗೆ ಕೈ ಹಾಕಿತು. ಈ ನಡುವೆ ಏರಾನ್ ಫಿಂಚ್ ಔಟಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಅಜೇಯ 18 ಮತ್ತು ಗುರುಕೀರತ್ ಸಿಂಗ್ ಅಜೇಯ 21 ರನ್ ಗಳಿಸಿ 13.3 ಓವರ್ ಗಳಲ್ಲೇ 85 ರನ್ ಗುರಿ ತಲುಪಿ ತಂಡಕ್ಕೆ 8 ವಿಕೆಟ್ ಗಳ ಸುಲಭ ಜಯ ಕೊಡಿಸಿದರು.