Publish Date: Tue, 29 Sep 2020 (09:54 IST)
Updated Date: Tue, 29 Sep 2020 (09:57 IST)
ಬೆಂಗಳೂರು: ಕಿಚ್ಚ ಸುದೀಪ್ ಸದ್ಯಕ್ಕೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಐಪಿಎಲ್ 13 ರ ಕಾಮೆಂಟರಿ ಪ್ಯಾನೆಲ್ ನಲ್ಲಿದ್ದಾರೆ. ಕಿಚ್ಚ ಐಪಿಎಲ್ ಪಂದ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಬರೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಎರಡೆರಡು ಬಾರಿ ಕಿಚ್ಚ ಕರ್ನಾಟಕ ಮೂಲದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಮಯಾಂಕ್ ಅಗರ್ವಾಲ್ ರ ಬ್ಯಾಟಿಂಗ್ ನ್ನು ಕೊಂಡಾಡಿದ್ದರು. ಆದರೆ ಅದೇ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಮಾತನಾಡಿರಲಿಲ್ಲ. ಇದನ್ನು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ನೀವು ಕೇವಲ ಮಯಾಂಕ್ ರನ್ನು ಮಾತ್ರ ಹೊಗಳುತ್ತೀರಿ? ರಾಹುಲ್ ಕೂಡಾ ನಿಮ್ಮ ಅಭಿಮಾನಿ ಅವರ ಬಗ್ಗೆಯೂ ಹೇಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ‘ನಾನು ರಾಹುಲ್ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಚರ್ಚೆ ವೇಳೆಯೇ ಹೇಳಿದ್ದೇನೆ. ಆತ ಜಗತ್ತಿನ ಅತ್ಯುತ್ತಮ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಿದ್ದಾನೆಂದು. ಮಯಾಂಕ್ ಗೂ ಆ ಸಾಮರ್ಥ್ಯವಿದೆ, ಅದನ್ನು ಅವರು ಈ ಐಪಿಎಲ್ ನಲ್ಲಿ ಪ್ರದರ್ಶಿಸಲಿ ಎಂಬುದು ನನ್ನ ಅಭಿಪ್ರಾಯವಷ್ಟೇ’ ಎಂದಿದ್ದಾರೆ.