ನವದೆಹಲಿ: ವಾಯು, ನೀರು, ಇತರೆ ಮಾಲಿನ್ಯದಿಂದ ಮೃತಪಟ್ಟವರ ಪ್ರಮಾಣದಲ್ಲಿ ಪ್ರಪಂಚದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಅಮೆರಿಕದ ಇಕಾಹ್ನ್ ಮೆಡಿಸಿನ್ ಸ್ಕೂಲ್‍ನ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ದೆಹಲಿಯ ಐಐಟಿ ವಿದ್ಯಾರ್ಥಿಗಳೂ ಸಹ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. 2015ರಲ್ಲಿ ಗಾಳಿ, ನೀರು ಹಾಗೂ ಇತರೆ ಮಾಲಿನ್ಯದಿಂದ ಸುಮಾರು 25 ಲಕ್ಷ ಜನ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ಅಧ್ಯಯನ ಹೇಳಿದೆ.
ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶ ಕ್ಯಾನ್ಸರ್ ಹಾಗೂ ಶ್ವಾಸಕೋಶ ಕಾಯಿಲೆಗಳಿಂದ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷ ಮಾಲಿನ್ಯದಿಂದ 90 ಲಕ್ಷ ಜನ ಸಾವನ್ನಪ್ಪುತ್ತಿದ್ದು, 2015ರಲ್ಲಿ ಭಾರತದಲ್ಲಿ ಮಾತ್ರ 25 ಲಕ್ಷ ಜನ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 18 ಲಕ್ಷ ಜನ ಮೃತಪಟ್ಟಿದ್ದಾರೆ.
ವೇಗವಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ರಾಷ್ಟ್ರಗಳಾದ ಭಾರತ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಮಡಗಾಸ್ಕರ್ ಹಾಗೂ ಕೀನ್ಯಾದಲ್ಲಿ 4 ರಲ್ಲಿ 1 ಭಾಗದಷ್ಟು ಸಾವು ಮಾಲಿನ್ಯದಿಂದ ಸಂಭವಿಸುತ್ತಿದೆ ಎಂದು ಅಧ್ಯಯನದ ಅಂಕಿಅಂಶ ಹೇಳಿದೆ.