ಉಕ್ರೇನ್ ಮೇಲೆ 30 ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದ್ದ ರಷ್ಯಾ , ಉಕ್ರೇನ್ ಮೇಲಿನ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಶುಕ್ರವಾರ ಪ್ರಕಟಿಸಿದೆ.
ಜೊತೆಗೆ ತನ್ನ ಮುಂದಿನ ಗುರಿ ಈಗಾಗಲೇ ಉಕ್ರೇನ್ನ ಬಂಡುಕೋರರ ವಶದಲ್ಲಿರುವ ಡೋನ್ಬಾಸ್ ಪ್ರಾಂತ್ಯಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಿಸುವುದಾಗಿದೆ ಎಂದು ಹೇಳಿಕೊಂಡಿದೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಉಕ್ರೇನ್ಗೆ ಸೇರಿದ ಲುಹಾನ್ಸ್ಕ್ನ ಶೇ.93ರಷ್ಟುಮತ್ತು ಡೋನ್ಟೆಸ್ಕ್ನ ಶೇ.54ರಷ್ಟುಭಾಗ ನಮ್ಮ ವಶದಲ್ಲಿವೆ. ಈ ಎರಡೂ ಭಾಗಗಳನ್ನು ಸೇರಿ ಡೋನ್ಬಾಸ್ ಎನ್ನಲಾಗುತ್ತದೆ.
ಇವುಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುವುದು ನಮ್ಮ ಮುಂದಿನ ಮುಖ್ಯ ಗುರಿಯಾಗಿರಲಿದೆ ಎಂದು ಹೇಳಿದೆ. ಕಳೆದ 30 ದಿನಗಳ ಸತತ ಹೋರಾಟದ ಹೊರತಾಗಿಯೂ ಅಂದುಕೊಂಡ ರೀತಿಯಲ್ಲಿ ಉಕ್ರೇನ್ ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಸಾಧ್ಯವಾಗಿಲ್ಲ.
ಉಕ್ರೇನ್ ಸೇನೆ ನಿರೀಕ್ಷೆಗೂ ಮೀರಿ ಪ್ರತಿರೋಧ ತೋರುತ್ತಿರುವುದು ರಷ್ಯಾಕ್ಕೆ ಭಾರೀ ಹಿನ್ನೆಡೆಯಾಗಿದೆ. ಕಳೆದ 30 ದಿನಗಳಲ್ಲಿ ರಷ್ಯಾದ 15000ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ.