ಕಾಬೂಲ್ : ಕಳೆದ ವರ್ಷ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ 1 ವರ್ಷಕ್ಕಿಂತಲೂ ಹೆಚ್ಚು ಕಾಲ ಹೆಣ್ಣುಮಕ್ಕಳಿಗೆ ಪ್ರೌಢಶಾಲೆಗೆ ಹೋಗಲು ನಿರ್ಬಂಧಿಸಿದ್ದು, ಇದೀಗ ಈ ವಾರ ನಡೆಯಲಿರುವ ಪ್ರೌಢಶಾಲಾ ಪರೀಕ್ಷೆಯನ್ನು ಬರೆಯಲು ಹೆಣ್ಣುಮಕ್ಕಳಿಗೂ ಅನುಮತಿ ನೀಡಿದೆ.
ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 31 ಪ್ರಾಂತ್ಯಗಳಿಗೆ ತಾಲಿಬಾನ್ನ ನಿರ್ಧಾರ ಅನ್ವಯಿಸುತ್ತದೆ. ಪ್ರೌಢಶಾಲಾ ಪರೀಕ್ಷೆ ಬುಧವಾರದಿಂದ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಕೂಡಾ ಬರೆಯಲು ಅನುಮತಿಸಲಾಗುವುದು ಎಂದು ಕಾಬೂಲ್ ಶಿಕ್ಷಣ ಇಲಾಖೆಯ ಮುಖ್ಯಸ್ಥ ಎಹ್ಸಾನುಲ್ಲಾ ಕಿತಾಬ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಬುಧವಾರ ನಡೆಯಲಿರುವ ಪರೀಕ್ಷೆಗೆ ಡ್ರೆಸ್ ಕೋಡ್ ನೀಡಲಾಗಿದೆ. ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಕಡ್ಡಾಯವಾಗಿ ಹಿಜಬ್ ಅಥವಾ ಸ್ಕಾರ್ಫ್ ಅನ್ನು ಧರಿಸಬೇಕು.
ಪರೀಕ್ಷೆಯಲ್ಲಿ ಸೆಲ್ಫೋನ್ ಬಳಕೆ ನಿಷೇಧಿಸಲಾಗಿದೆ. ಬುಧವಾರ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಚಳಿಗಾಲದ ರಜೆಯ ಬಳಿಕ ಮಾರ್ಚ್ ಮಧ್ಯದ ವೇಳೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.