2013ರಲ್ಲಿ ನಡೆದ ಭಾರತೀಯ ನಾಗರಿಕ ಸರಬ್ಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಅಧಿಕಾರಿಯೊಬ್ಬರಿಗೆ ಪಾಕ್ ಕೋರ್ಟ್ ಜಾಮೀನು ರಹಿತ ಬಂಧನದ ವಾರಂಟ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಜೈಲಾಧಿಕಾರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅಧಿಕಾರ ಅದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿದೆ.
1990ರಲ್ಲಿ ಪಾಕಿಸ್ತಾನದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರಬ್ಜಿತ್ ಬಂಧನವಾಗಿತ್ತು. ಬಳಿಕ ಆತನಿಗೆ ಮರಣದಂಡನೆಯನ್ನು ಸಹ ವಿಧಿಸಲಾಗಿತ್ತು. ಆದರೆ ಆತ ಯಾವುದೇ ವಿಧ್ವಂಸಕ ಕೃತ್ಯದಲ್ಲಿ ತೊಡಗಿಲ್ಲ. ಪಾಕಿಸ್ತಾನ ಆತನ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಿದೆ ಎಂದು ಆತನ ಸಹೋದರಿ ಹೋರಾಟ ನಡೆಸಿದ್ದಳು.
ಪಾಕಿಸ್ತಾನದ ಲಖಪತ್ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಪ್ರಜೆ ಸರಬ್ಜಿತ್‌ನನ್ನು ಸಹಕೈದಿಗಳಾದ ಅಮಿರ್ ತಂಬಾ ಮತ್ತು ಮುದಸ್ಸರ್ ಹತ್ಯೆ ಮಾಡಿದ್ದರು. ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದ ಅವರಿಬ್ಬರು ಲಾಹೋರ್ ಮತ್ತು ಫೈಸಲಾಬಾದ್‌ನಲ್ಲಿ ನಡೆಸಲಾದ ಬಾಂಬ್ ಬ್ಲಾಸ್ಟ್ ಕೃತ್ಯಗಳಿಗೆ ಪ್ರತೀಕಾರವಾಗಿ ಆತನನ್ನು ಕೊಂದಿದ್ದೇವೆ ಎಂದಿದ್ದರು.