ಕ್ಯಾನ್ಬೆರಾ : ಮುಂದಿನ ವಾರ ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಭೆಯನ್ನು ಆಸ್ಟ್ರೇಲಿಯಾ ಬುಧವಾರ ರದ್ದುಗೊಳಿಸಿದೆ.
ಸ್ವದೇಶದ ಆರ್ಥಿಕ ಸಮಸ್ಯೆಯ ಹಿನ್ನೆಲೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ.
ಅಮೆರಿಕದಲ್ಲಿ ಸಾಲದ ಮಿತಿಯನ್ನು ತೆರವುಗೊಳಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಹಿನ್ನೆಲೆ ಬೈಡನ್ ಆಸ್ಟ್ರೇಲಿಯಾ ಹಾಗೂ ಪಪುವಾ ನ್ಯೂಗಿನಿಯಾ ಭೇಟಿಗಳನ್ನು ರದ್ದುಗೊಳಿಸಿದ್ದಾರೆ. ಆದರೂ ಈ ವಾರಾಂತ್ಯ ಅವರು ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕ್ವಾಡ್ ಶೃಂಗಸಭೆಯ ರದ್ದು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಮುಂದಿನ ವಾರ ಸಿಡ್ನಿಯಲ್ಲಿ ಕ್ವಾಡ್ ನಾಯಕರ ಸಭೆ ನಡೆಯುವುದಿಲ್ಲ. ಬದಲಿಗೆ ನಾವು ಜಪಾನ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಕ್ವಾಡ್ ನಾಯಕರೊಂದಿಗೆ ಆ ಚರ್ಚೆಯನ್ನು ನಡೆಸುತ್ತೇವೆ ಎಂದಿದ್ದಾರೆ.