ವಾಷಿಂಗ್ಟನ್(ಆ.13): ಮುಂದಿನ ಕೆಲ ವರ್ಷಗಳಲ್ಲಿ ಕೋವಿಡ್-19 ವೈರಸ್ ಕೂಡ ಇನ್ನಿತರ ಸಾಮಾನ್ಯ ನೆಗಡಿಕಾರಕ ವೈರಸ್ನಂತಾಗಬಹುದು. ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ.
ಅಮೆರಿಕ ಮತ್ತು ನಾರ್ವೆ ವಿಜ್ಞಾನಿಗಳ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕೋವಿಡ್-19 (ಸಾರ್ಸ್-ಕೋವ್-2) ವೈರಸ್ ಇನ್ನು ಕೆಲ ವರ್ಷಗಳಲ್ಲಿ ಜಾಗತಿಕವಾಗಿ ಸ್ಥಳೀಯ ಸಾಂಕ್ರಾಮಿಕ ವೈರಸ್ ಆಗಲಿದೆ. ಅಂದರೆ ಸ್ಥಳೀಯವಾಗಿ ಮಾತ್ರ ಇದು ಹರಡಲಿದೆ. ಈಗ ಇದು ವಯಸ್ಸಾದವರ ಮೇಲೇ ಹೆಚ್ಚು ಪರಿಣಾಮ ಉಂಟುಮಾಡುತ್ತಿದ್ದರೂ ಇನ್ನು ಕೆಲ ವರ್ಷಗಳಲ್ಲಿ ಲಸಿಕೆಯಿಂದಾಗಿ ಅಥವಾ ನೈಸರ್ಗಿಕವಾಗಿ ಜಗತ್ತಿನ ಎಲ್ಲ ಹಿರಿಯರಿಗೂ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಲಭಿಸಲಿದೆ. ಆಗ ಇದು ಲಸಿಕೆ ಪಡೆಯದ ಮಕ್ಕಳಲ್ಲಿ ಮಾತ್ರ ಸಣ್ಣ ಪ್ರಮಾಣದ ನೆಗಡಿ ಉಂಟುಮಾಡುವ ಸಾಮಾನ್ಯ ವೈರಸ್ ಆಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ.
ಉದಾಹರಣೆಗೆ, 1889-1890ರ ಸಮಯದಲ್ಲಿ ಏಷಿಯಾಟಿಕ್ ಫ್ಮ್ಲ ವೈರಸ್ ಜಗತ್ತಿನಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಸಾವನ್ನಪ್ಪಿದ್ದರು. ಆದರೆ, ಈಗ 7ರಿಂದ 12 ತಿಂಗಳ ನಡುವಿನ ಮಕ್ಕಳಿಗಷ್ಟೇ ಈ ವೈರಸ್ನಿಂದ ನೆಗಡಿಯಾಗುತ್ತದೆ. ಹೆಚ್ಚಿನ ಕೊರೋನಾ ವೈರಸ್ಗಳೆಲ್ಲ ಹೀಗೇ ವರ್ತಿಸುತ್ತವೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.