ವಾಷಿಂಗ್ಟನ್ : ಅಮೆರಿಕದ ಶ್ವೇತಭವನದಲ್ಲಿ ಅನುಮಾನಾಸ್ಪದ ಬಿಳಿ ಬಣ್ಣದ ವಸ್ತು ಪತ್ತೆಯಾಗಿದ್ದು, ಆ ವಸ್ತುವನ್ನು ಕೊಕೇನ್ ಎಂದು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರಾಂತ್ಯದ ಹಿನ್ನೆಲೆ ಕ್ಯಾಂಪ್ ಡೇವಿನ್ಗೆ ತೆರಳಿದ್ದು, ಈ ವೇಳೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ವೆಸ್ಟ್ ವಿಂಗ್ನ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರದೇಶದಲ್ಲಿ ರಹಸ್ಯ ಸೇವಾ ಏಜೆಂಟ್ಗಳು ಬಿಳಿ ಬಣ್ಣದ ಪುಡಿಯನ್ನು ಗಮನಿಸಿದ್ದಾರೆ. ಬಳಿಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ವಸ್ತುವನ್ನು ಪರೀಕ್ಷಿಸಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಕೊಕೇನ್ ಎಂಬುದು ತಿಳಿದುಬಂದಿದೆ.
ಅಜ್ಞಾತ ವಸ್ತು ಪತ್ತೆಯಾದ ಹಿನ್ನೆಲೆ ಶ್ವೇತಭವನದ ಸಂಕೀರ್ಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಿದ್ದರೂ ರಹಸ್ಯ ಸೇವೆ ಈ ವಸ್ತು ಯಾವುದು ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಅದನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಶ್ವೇತಭವನಕ್ಕೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.