ನ್ಯೂಯಾರ್ಕ್ : ಅಮೆರಿಕ ಮತ್ತು ಫ್ರಾನ್ಸ್ ರಾಷ್ಟ್ರಗಳು ಭಾರತದೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಆಸಕ್ತಿ ಹೊಂದಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಹೇಳಿದ್ದಾರೆ.
ಇದೇ ವೇಳೆ ಬ್ಲಿಂಕನ್ ಅವರು ಭವಿಷ್ಯದಲ್ಲಿ ಭಾರತ ಮತ್ತು ಪ್ಯಾರಿಸ್ ನಡುವೆ 'ಪರಮಾಣು ಜಲಾಂತರ್ಗಾಮಿ' ಮೈತ್ರಿ ಮಾಡಿಕೊಳ್ಳುವ ಕುರಿತು ನಿರ್ದಿಷ್ಟವಾಗಿ ಯಾವುದೇ ವಿಷಯವನ್ನು ವಿವರಿಸಲಿಲ್ಲ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯುತ್ತಿರುವ ಈ ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಪರಮಾಣು ಜಲಾಂತರ್ಗಾಮಿ ಮೈತ್ರಿಯನ್ನು ಅಮೆರಿಕ ಸ್ವಾಗತಿಸುತ್ತದೆಯೇ' ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಇದೇ ವೇಳೆ ಪತ್ರಕರ್ತರು 'ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ಕುರಿತು ಅವರನ್ನು ಕೇಳಿದರು.
ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಬ್ಲಿಂಕನ್, 'ನಾನು ಭವಿಷ್ಯದ ಬಗ್ಗೆ ಯಾವುದೇ ಊಹೆ ಮಾಡಿ ಹೇಳುವುದಿಲ್ಲ. ಆದರೆ ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಲ್ಲಿ ಫ್ರಾನ್ಸ್ ಮತ್ತು ಅಮೆರಿಕ ಎರಡೂ ಬಲವಾದ ಆಸಕ್ತಿಗಳನ್ನು ಹೊಂದಿವೆ ಎಂಬುದನ್ನು ಮಾತ್ರ ಹೇಳಬಲ್ಲೆ' ಎಂದರು.