ಜಮ್ಮು-ಕಾಶ್ಮೀರ (ಜುಲೈ 4); ಕಳೆದ ಜೂನ್ 27 ರಂದು ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ಶಂಕೆ ವ್ಯಕ್ತಪಡಿಸಿತ್ತು.
ಈ ಪ್ರಕರಣದ ತನಿಖೆಗೆಯನ್ನು ಎನ್ಐಎ ಗೆ ವಹಿಸಲಾಗಿದ್ದು, ಎನ್ಐಎ ಅಧಿಕಾರಿಗಳು ಸಹ ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂಬ ನಿಟ್ಟಿನಲ್ಲಿಯೇ ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ನಡುವೆ ಇಂದು ಮತ್ತೆ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾಗಿದ್ದು ಈ ಭಾಗದಲ್ಲಿ ಇನ್ನಷ್ಟು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.
ಜಮ್ಮುವಿನಲ್ಲಿರುವ ಭಾರತದ ವಾಯುಸೇನೆಯ ವಾಯುನೆಲೆಯಲ್ಲಿ ಡ್ರೋನ್ ದಾಳಿಯ ನಡೆದಂದಿನಿಂದಲೇ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಸೈನ್ಯವನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಸಂಭವನೀಯ ದಾಳಿಯನ್ನು ತಡೆಯಲು ರಕ್ಷಣಾ ಇಲಾಖೆ ಮುಂದಾಗಿದೆ ಎನ್ನಲಾಗಿತ್ತು. ಅಷ್ಟರಲ್ಲೇ ಇದೀಗ ಮತ್ತೆ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.