ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶ, ವಿಶ್ವದ ಹಿರಿಯಣ್ಣ ಅಮೇರಿಕದ 45ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಿನ್ನೆ ಪದಗ್ರಹಣ ಮಾಡಿದ್ದಾರೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ಟ್ರಂಪ್ ಇಸ್ಲಾಂ ಉಗ್ರವಾದವನ್ನು ಬುಡಸಮೇತ ಕಿತ್ತೊಗೆಯುವ ಘೋಷಣೆ ಮಾಡಿದ್ದಾರೆ.
10 ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದ ಅದ್ದೂರಿ ಸಮಾರಂಭದಲ್ಲಿ ಐತಿಹಾಸಿಕ ಲಿಂಕನ್ ಬೈಬಲ್ ಹಿಡಿದುಕೊಂಡು ಟ್ರಂಪ್ ಶುಕ್ರವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದರು. ಅಮೇರಿಕಾ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಈ ಸಮಯದಲ್ಲಿ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಎರಡು ಬೈಬಲ್ ಗಳನ್ನು ಕೈಯ್ಯಲ್ಲಿ ಹಿಡಿದಿದ್ದರು. ಅವರಿಗೂ ಮುನ್ನ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸುತ್ತಿದ್ದಂತೆ ಮುಸ್ಲಿಂ ಮೂಲಭೂತವಾದ, ಉಗ್ರವಾದದ ವಿರುದ್ಧ ಗುಡುಗಿದ ಟ್ರಂಪ್, ಜಾಗತಿಕ ಭಯೋತ್ಪಾದನೆಯನ್ನು ನಾಶಮಾಡುವುದಾಗಿ ಗುಡುಗಿ, ಉಗ್ರರನ್ನು ಸಲಹುತ್ತಿರುವ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ಅಮೆರಿಕಾದ ವೈಭವವನ್ನು ಮರಳಿ ತರುವುದಾಗಿ ಜನತೆಗೆ ಭರವಸೆ ನೀಡಿದ ಅವರು ಶ್ರೇಷ್ಠ ಅಮೇರಿಕಾ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ.
ನೂತನ ಅಧ್ಯಕ್ಷ ಟ್ರಂಪ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.ಟ್ರಂಪ್ ಅವರಿಗೆ ಶುಭಾಶಯ ಕೋರಿರುವ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಭಾರತದಲ್ಲಿ ನಿಮ್ಮನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಮೇರಿಕಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ, ಅಮೆರಿಕಾ- ಭಾರತದ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಿ, ಪರಸ್ಪರ ಸಹಕಾರದಿಂದ ಕಾರ್ಯ ನಿರ್ಹಹಿಸಲು ಉತ್ಸುಕರಾಗಿರುವುದಾಗಿ ಪ್ರಧಾನಿ ಮೋದಿ ಆಶಿಸಿದ್ದಾರೆ.
ಟ್ರಂಪ್ ಅಮೇರಿಕಾದ ಅಧ್ಯಕ್ಷರಾಗುತ್ತಿರುವುದನ್ನು ವಿರೋಧಿಸಿ ದೇಶದ ಅನೇಕ ಕಡೆಗಳಲ್ಲಿ ಉಗ್ರ ಪ್ರತಿಭಟನೆಗಳು ನಡೆದವು.