Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೊನಾಲ್ಡ್ ಟ್ರಂಪ್ ಪೌರತ್ವ ನಿಯಮದಿಂದ ಭಾರತೀಯರಿಗೆ ನಿಜವಾಗಿಯೂ ತೊಂದರೆಯೇ: ಇಲ್ಲಿದೆ ಅಸಲಿ ಸತ್ಯ

Donald Trump

Krishnaveni K

ವಾಷಿಂಗ್ಟನ್ , ಶುಕ್ರವಾರ, 8 ನವೆಂಬರ್ 2024 (10:47 IST)
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆದು ಹೊಸ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಗೆದ್ದು ಬಂದಿದ್ದೂ ಆಗಿದೆ. ಆದರೆ ಇದರ ಬೆನ್ನಲ್ಲೇ ಅವರು ಪೌರತ್ವ ನಿಯಮ ಬದಲಾವಣೆ ಜಾರಿಗೆ ತರಲಿದ್ದಾರೆ. ಇದರಿಂದ ಅಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ತೊಂದರೆಯಾಗಲಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದು ಎಷ್ಟು ಸತ್ಯ? ಇಲ್ಲಿದೆ ಒಂದು ವಿಶ್ಲೇಷಣೆ.

ಈ ಬಾರಿ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎದುರುಗಡೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರೇ ಕಣಕ್ಕಿಳಿದಿದ್ದರು. ಹಾಗಿದ್ದರೂ ಬಹುತೇಕ ಭಾರತೀಯರು ಬೆಂಬಲಿಸಿದ್ದು ಟ್ರಂಪ್ ಅವರನ್ನು. ಇದಕ್ಕೆ ಅವರು ಈ ಹಿಂದಿನ ಅವಧಿಯಲ್ಲಿ ಭಾರತೀಯರ ಮೇಲೆ ಹೊಂದಿದ್ದ ಅಭಿಪ್ರಾಯಗಳೂ ಕಾರಣ ಎನ್ನಬಹುದು.

ಡೊನಾಲ್ಡ್ ಟ್ರಂಪ್ ಒಬ್ಬ ಪಕ್ಕಾ ಬ್ಯುಸಿನೆಸ್ ಮ್ಯಾನ್. ತಮ್ಮ ದೇಶಕ್ಕೆ ಏನು ಒಳಿತಾಗುತ್ತದೋ ಅದನ್ನೇ ಯೋಚನೆ ಮಾಡುತ್ತಾರೆ. ತಮ್ಮ ಚುನಾವಣಾ ಪ್ರಚಾರದಲ್ಲೂ ಅವರು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಳ ಮಾಡುವುದು, ಹಣದುಬ್ಬರದ ಏರಿಳಿತ ನಿಯಂತ್ರಿಸುವುದು ಇತ್ಯಾದಿ ಆರ್ಥಿಕ ಪ್ರಗತಿಗೆ ಒತ್ತು ನೀಡುವ ಭರವಸೆಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಜನ ವೋಟ್ ಮಾಡಿದ್ದಾರೆ. ಆದರೆ ಕಮಲಾ ಹ್ಯಾರಿಸ್ ಭಾಷಣದಲ್ಲಿ ಇದು ಯಾವುದರ ಪ್ರಸ್ತಾಪವೂ ಇರಲಿಲ್ಲ. ಡೊನಾಲ್ಡ್ ಟ್ರಂಪ್ ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ಕೆಲವು ಕಠಿಣ ನಿಯಮಗಳನ್ನು ತಂದರೂ ಇದರಿಂದ ಭಾರತೀಯರಿಗೆ ಯಾವುದೇ ತೊಂದರೆ ಮಾಡಿರಲಿಲ್ಲ.

ಪೌರತ್ವ ನಿಯಮ ಬದಲಾವಣೆಯಿಂದ ಭಾರತೀಯರಿಗೆ ತೊಂದರೆಯೇ
ಸಾಮಾನ್ಯವಾಗಿ ಇಲ್ಲಿಂದ ಅಮೆರಿಕಾಗೆ ತೆರಳುವ ಭಾರತೀಯರು ಉದ್ಯೋಗ ನಿಮಿತ್ತ ಆಯಾ ಸಂಸ್ಥೆಗಳಿಂದಲೇ ಕಾನೂನುಬದ್ಧವಾಗಿ ಬಂದಿರುತ್ತಾರೆ. ಕಾನೂನುಬದ್ಧವಾಗಿ ವೀಸಾದಲ್ಲಿ ಬಂದವರಿಗೆ ಈ ನಿಯಮದಿಂದ ಯಾವುದೇ ತೊಂದರೆಯಾಗದು. ಡೊನಾಲ್ಡ್ ಟ್ರಂಪ್ ಇದೀಗ ಪೌರತ್ವ ನಿಯಮ ಜಾರಿಗೆ ತರಲು ಉದ್ದೇಶಿಸಿರುವುದು ಅಕ್ರಮ ವಲಸೆಗಾರರನ್ನು ಟಾರ್ಗೆಟ್ ಮಾಡಿ ಎನ್ನಲಾಗುತ್ತಿದೆ.

ಹಾಗಿದ್ದರೂ ಒಂದು ವೇಳೆ ಟ್ರಂಪ್ ಈ ನಿಯಮ ಜಾರಿಗೆ ತಂದರೆ ಅಮೆರಿಕಾದಲ್ಲಿ ಜನಿಸುವ ಭಾರತೀಯ ದಂಪತಿಗಳ ಮಕ್ಕಳಿಗೆ ನ್ಯಾಚುರಲ್ ಪೌರತ್ವ ಸಿಗದಿರಬಹುದು. ಅದರ ಬದಲು ಪೋಷಕರ ವೀಸಾದಲ್ಲೇ ಮಕ್ಕಳು ಅಲ್ಲಿರಬೇಕಾಗುತ್ತದೆ. ಒಂದು ವೇಳೆ ಅಲ್ಲಿ ಜನಿಸುವ ಮಕ್ಕಳಿಗೆ ಅಲ್ಲಿನ ಪೌರತ್ವ ಸಿಗದೇ ಇದ್ದಾಗ ನೈಸರ್ಗಿಕವಾಗಿ ಅಲ್ಲಿನ ಪ್ರಜೆಗಳಿಗೆ ಸಿಗುವಂತಹ ಕೆಲವು ಸ್ಕಾಲರ್ ಶಿಪ್, ಉನ್ನತ ಶಿಕ್ಷಣಕ್ಕೆ ರಿಯಾಯಿತಿ ದರದ ಶುಲ್ಕ ಇತ್ಯಾದಿ ಸೌಲಭ್ಯಗಳು ಸಿಗದೇ ಹೋಗಬಹುದು. ಅದರ ಹೊರತಾಗಿ ಅಲ್ಲಿ ಉಳಿದುಕೊಳ್ಳುವುದಕ್ಕೆ ಅಥವಾ ಶಿಕ್ಷಣ ಪಡೆಯಲು ಹೆಚ್ಚಿನ ಸಮಸ್ಯೆಯಾಗದು ಎಂಬುದು ಅಮೆರಿಕಾದಲ್ಲಿ ಉದ್ಯೋಗಿಯಾಗಿರುವ ಒಬ್ಬರ ಅಭಿಪ್ರಾಯ.

ಸಾಮಾನ್ಯವಾಗಿ ಅಮೆರಿಕಾದಲ್ಲಿ ಉದ್ಯೋಗಕ್ಕಾಗಿ ತೆರಳಿದವರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಆಯಾ ಕಂಪನಿಗಳೇ ಗ್ರೀನ್ ಕಾರ್ಡ್ ಗೆ ಅಪ್ಲೈ ಮಾಡುತ್ತಿತ್ತು. ಆದರೆ ಕೊರೋನಾ ಬಂದ ಮೇಲೆ ಈ ಪ್ರಕ್ರಿಯೆ ಕೊಂಚ ಕಡಿಮೆಯಾಗಿದೆ. ಅಕ್ರಮ ವಲಸೆಗಾರರಿಗೆ ಫೆಡರಲ್ ಗವರ್ನಮೆಂಟ್ ನೌಕರಿ ಸೇರಿದಂತೆ ಇನ್ನಿತರ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ.

ಪೌರತ್ವ ಖಾಯಿದೆ ಬದಲಾವಣೆ ಸುಲಭವಲ್ಲ
ಡೊನಾಲ್ಡ್ ಟ್ರಂಪ್ ಹೇಳಿದ ಮಾತ್ರಕ್ಕೆ ಪೌರತ್ವ ನಿಯಮ ಬದಲಾವಣೆ ಈಗಿಂದೀಗಲೇ ಆಗಿಬಿಡುವುದಿಲ್ಲ. ಪೋಷಕರು ಹೊರದೇಶದವರೇ ಆಗಿದ್ದರೂ ಅಮೆರಿಕಾದಲ್ಲಿ ಜನಿಸಿದ ಮಕ್ಕಳಿಗೆ ನೈಸರ್ಗಿಕವಾಗಿ ಅಲ್ಲಿನ ಪೌರತ್ವ ನೀಡಬೇಕು ಎನ್ನುವುದು ಅಮೆರಿಕಾದ ಸಂವಿಧಾನದಲ್ಲೇ ಇದೆ.

ಒಂದು ವೇಳೆ ಟ್ರಂಪ್ ಈ ನಿಯಮವನ್ನು  ಬದಲಾಯಿಸಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಅದು ಅಷ್ಟು ಸುಲಭದ ಕೆಲಸವಲ್ಲ. ಅಮೆರಿಕಾ ಕಾಂಗ್ರೆಸ್, ಸೆನೆಟ್ ನ ಅನುಮತಿ ಬೇಕಾಗುತ್ತದೆ. ಹೀಗಾಗಿ ಅದು ಅಷ್ಟು ಸುಲಭವಾಗಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಒಂದು ವೇಳೆ ಇಷ್ಟೆಲ್ಲಾ ಮಾಡಿಯೂ ಟ್ರಂಪ್ ಪೌರತ್ವ ನಿಯಮ ಬದಲಾವಣೆ ತಂದರೂ ಅದರಿಂದ ಭಾರತೀಯರಿಗೆ ಅಷ್ಟರಮಟ್ಟಿಗೆ ಪರಿಣಾಮ ಬೀರದು. ಡೊನಾಲ್ಡ್ ಟ್ರಂಪ್ ಗೆ ಈ ಬಾರಿಯೂ ಶೇ.60 ಕ್ಕಿಂತ ಹೆಚ್ಚು ಭಾರತೀಯರು ಮತ ಹಾಕಿದ್ದಾರೆ. ಅಮೆರಿಕಾದಲ್ಲಿರುವ ಸಾಕಷ್ಟು ಭಾರತೀಯರು ಅವರನ್ನು ಬೆಂಬಲಿಸುತ್ತಾರೆ. ಹೀಗಾಗಿ ಭಾರತೀಯರಿಗೆ ಕೆಡುಕಾಗುವ ನಿಯಮವನ್ನು ಅವರು ಅಷ್ಟು ಬೇಗ ಜಾರಿಗೆ ತರುವ ಸಾಧ್ಯತೆಯಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದೀರಾ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್