ಆತ್ಮಹತ್ಯಾ ಬಾಂಬ್ ದಾಳಿಗೆ 3 ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಜನರು ಆಹುತಿಯಾದ ಹೃದಯವಿದ್ರಾವಕ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸೋಮವಾರ ನಡೆದಿದೆ.ಘಟನೆಯಲ್ಲಿ 60ಕ್ಕಿಂತ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಕ್ ಪಂಜಾಬ್ ವಿಧಾನಸಭೆಯ ಹೊರಗೆ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮಧ್ಯಕ್ಕೆ ಬಂದ ವ್ಯಕ್ತಿಯೋರ್ವ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.
ಲಾಹೋರ್ ಸಂಚಾರಿ ಪೊಲೀಸ್ ಮುಖ್ಯಸ್ಥ ಕ್ಯಾಪ್ಟನ್ ಅಹಮದ್ ಮೊಬೀನ್, ಹಿರಿಯ ಪೊಲೀಸ್ ಅಧೀಕ್ಷಕ ಜಾಹಿದ್ ಗೊಂಡಾಲ್ ಮತ್ತು ಡಿಎಸ್‌ಪಿ ಪರ್ವೇಜ್ ಭಟ್ ಸಾವನ್ನಪ್ಪಿದ ಅಧಿಕಾರಿಗಳಾಗಿದ್ದಾರೆ.
ಗಾಯಗೊಂಡವರಲ್ಲಿ 11 ಜನರ ಸ್ಥಿತಿ ಚಿಂಜಾಜನಕವಾಗಿದೆ ಎಂದು ಪಂಜಾಬ್ ಆರೋಗ್ಯ ಸಚಿವ ಖ್ವಾಜಾ ಸಲ್ಮಾನ್ ರಫೀಕ್ ತಿಳಿಸಿದ್ದಾರೆ.
ಉಗ್ರನ ಗುರಿ ಪೊಲೀಸ್ ಅಧಿಕಾರಿಗಳೇ ಆಗಿದ್ದರು, ಎಂದು ರಫೀಕ್ ಸ್ಪಷ್ಟ ಪಡಿಸಿದ್ದಾರೆ.
ಮೊಬಿನ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತಣ್ಣಗಾಗಿಸಲು ಪ್ರಯತ್ನಿಸುತ್ತಿದ್ದರು. ಆಗ ಏಕಾಏಕಿ ಮೋಟಾರ್ ಬೈಕ್ ಏರಿ ಬಂದ ದಾಳಿಕೋರ ಪೊಲೀಸ್ ಅಧಿಕಾರಿಗಳ ಬಳಿ ಬಂದು ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಹತ್ತಿರದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಪೋಟ ಎಷ್ಟೊಂದು ಪ್ರಭಾವಶಾಲಿಯಾಗಿತ್ತೆಂದರೆ ಹಲವಾರು ಕೀಲೋಮೀಟರ್‌ಗಳವರೆಗೆ ಸದ್ದು ಕೇಳಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.