ಮುಖ್ಯಮಂತ್ರಿ ಪದವಿಗೇರಲು ಶತಾಯಗತಾಯ ಪ್ರಯತ್ನ ನಡೆಸಿರುವ ಶಶಿಕಲಾ ನಟರಾಜನ್ ಮತ್ತು ದಿವಂಗತ ಸಿಎಂ ಜಯಲಲಿತಾ ಮತ್ತು ಇತರ ಇಬ್ಬರ ಮೇಲಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಇಂದು ಹೊರಬೀಳುವ ಸಾಧ್ಯತೆಗಳಿವೆ. ಒಂದು ವೇಳೆ ಸುಪ್ರೀಂ ಶಶಿಕಲಾ ಅವರನ್ನು ಅಪರಾಧಿ ಎಂದು ಪರಿಗಣಿಸಿದ್ದಲ್ಲಿ ಅವರು ಜೈಲು ಸೇರುವುದು ಖಚಿತ. ಹೀಗಾಗಿ ಶಶಿಕಲಾ ಅವರ ರಾಜಕೀಯ ಮಹಾತ್ವಾಕಾಂಕ್ಷೆಯ ಹಾದಿ ದುರ್ಗಮವಾಗಿರುವುದಂತೂ ಸತ್ಯ.
ಶಶಿಕಲಾ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಸುಪ್ರೀಂ ತೀರ್ಪಿನ ಬಗ್ಗೆ ದೇಶಾದ್ಯಂತ ಕುತೂಹಲ ಮನೆಮಾಡಿದೆ. ಒಂದು ವೇಳೆ ಶಶಿಕಲಾ ತಪ್ಪಿತಸ್ಥೆ ಎಂದು ಸುಪ್ರೀಂ ತೀರ್ಪು ಬಂದರೆ, ಶಶಿಕಲಾ ಮುಂದಿನ ಆರು ವರ್ಷಗಳ ಕಾಲ ರಾಜಕೀಯದಿಂದ ದೂರು ಇರಬೇಕಾಗುತ್ತದೆ. ಆದರೆ ಪ್ರಕರಣ ಖುಲಾಸೆಯಾದರೆ ತಮಿಳುನಾಡು ಸಿಎಂ ಗುದ್ದೆಗ ಏರುವ ಶಶಿಕಲಾ ಹಾದಿ ಸುಗಮವಾಗಲಿದೆ.
ನ್ಯಾಯಮೂರ್ತಿ ಪಿಜಿ ಘೋಷ್ ಮತ್ತು ಅಮಿತಾಬ್ ರಾವ್ ನೇತೃತ್ವದ ಪೀಠ ಇಂದು ಮುಂಜಾನೆ 10.30ಕ್ಕೆ ಸುಪ್ರೀಂ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ.
ನಾಲ್ಕು ಜನ ಆರೋಪಿಗಳಲ್ಲಿ ಒಬ್ಬರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವನ್ನಪ್ಪಿರುವುದರಿಂದ ಅವರ ಮೇಲಿನ ಪ್ರಕರಣವನ್ನು ವಜಾಗೊಳಿಸಲಾಗುವುದು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ, ಶಶಿಕಲಾ ಮತ್ತು ಅವರ ಸಂಬಂಧಿಗಳಾದ ಸುಧಾಕರನ್ ಮತ್ತು ಇಳವರಸಿ ನಿರಪರಾಧಿಗಳೆಂದು ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.