ಬೆಂಗಳೂರು: ಹಾಗಲಕಾಯಿ ರುಚಿ ಮಾತ್ರ ಕಹಿ. ಆದರೆ ಇದರ ಗುಣ ಸಿಹಿ. ಅಂದರೆ ನೀಡುವ ಆರೋಗ್ಯಕರ ಗುಣಗಳು ನಮ್ಮ ಜೀವನವನ್ನು ಸಿಹಿ ಮಾಡುತ್ತದೆ. ಯಾವೆಲ್ಲಾ ರೋಗಕ್ಕೆ ಹಾಗಲಕಾಯಿ ಮನೆ ಮದ್ದು ನೋಡೋಣ.
ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣದಂಶ, ಪೊಟೋಶಿಯಂ ಮುಂತಾದ ಹಲವು ಅಂಶಗಳಿವೆ. ಇದರ ಜ್ಯೂಸ್ ಕಹಿಯಾದರೂ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಒಂದೊಂದಾಗಿ ನೋಡೋಣ.
ಮುಖ್ಯವಾಗಿ ಇದು ರಕ್ತದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿರಿಸುತ್ತದೆ. ಇದು ಮಧುಮೇಹಿಗಳಿಗೆ ಇನ್ಸುಲಿನ್ ರೂಪದಲ್ಲಿ ಕೆಲಸ ಮಾಡುತ್ತದೆ. ಇದರ ಜ್ಯೂಸ್ ಮಾಡಿ ದಿನಾ ಕುಡಿಯುವುದು ಮಧುಮೇಹಿಗಳಿಗೆ ಉತ್ತಮ. ಜ್ಯೂಸ್ ಮಾಡುವಾಗ ಕೊಂಚ ಕಾಳುಮೆಣಸು, ಶುಂಠಿ ಹಾಕಿದರೆ ಅದರ ಕಹಿ ಅಂಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.
ರಕ್ತದಲ್ಲಿರುವ ಬೇಡದ ಕೊಬ್ಬು ಕರಗಿಸಲೂ ಹಾಗಲಕಾಯಿ ಸೇವನೆ ಉತ್ತಮ ಎನ್ನಲಾಗುತ್ತದೆ. ಇದು ಉಷ್ಣ ಪ್ರಕೃತಿ ತರಕಾರಿ ಎಂದು ಕೆಲವು ಹೇಳಿದರೂ, ಮಲ ವಿಸರ್ಜನೆ ಸರಿಯಾಗಿ ಆಗಬೇಕಾದರೆ \, ಕಲ್ಮಶ ಹೋಗಬೇಕಾದರೆ ಇದನ್ನು ತಿಂದರೆ ಒಳ್ಳೆಯದು.
ಬೊಜ್ಜು ಕರಗಿಸಲು ಹಾಗಲಕಾಯಿ ಸೇವಿಸಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಈ ತರಕಾರಿ ಹೊಂದಿದೆ. ಇನ್ನು ಕಣ್ಣು, ಚರ್ಮ, ಕೂದಲುಗಳ ಬೆಳವಣಿಗೆಯನ್ನೂ ಹಾಗಲಕಾಯಿ ಹೆಚ್ಚಿಸುತ್ತದೆ. ಇನ್ನೇಕೆ ತಡ ಕಣ್ಣುಮುಚ್ಚಿಕೊಂಡು ಕಹಿ ನುಂಗಿ ಸಿಹಿ ಫಲ ಪಡೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ