ಬೆಂಗಳೂರು: ಊಟದ ಜತೆ ಒಂಚೂರು ಉಪ್ಪಿನಕಾಯಿ ನೆಚ್ಚಿಕೊಳ್ಳಲು ಎಲ್ಲರಿಗೂ ಇಷ್ಟ. ಏನಿಲ್ಲದಿದ್ದರೂ, ಮೊಸರು ಉಪ್ಪಿನಕಾಯಿ ಹಾಕಿಕೊಂಡು ಊಟ ಮಾಡುವೆ ಎನ್ನುವವರಿಗೊಂದು ಎಚ್ಚರಿಕೆ ಇಲ್ಲಿದೆ. ಹೆಚ್ಚು ಉಪ್ಪಿನಕಾಯಿ ತಿನ್ನುವುದು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.
ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಖಾರದ ಆಹಾರ ವಸ್ತುಗಳು ಬೇಗನೇ ಜೀರ್ಣವಾಗುವುದಿಲ್ಲ. ಹೀಗಾಗಿಯೇ ಏನಾದರೂ ಅನಾರೋಗ್ಯವಾದಾಗ ವೈದ್ಯರು ಖಾರ ತಿನ್ನದಂತೆ ಸಲಹೆ ಕೊಡುತ್ತಾರೆ.
ಖಾರ ತಿನ್ನುವುದರಿಂದ ಸಾಮಾನ್ಯವಾಗಿ ಬರುವ ಸಮಸ್ಯೆಯೆಂದರೆ ಹೊಟ್ಟೆಯುರಿ. ಇದರಲ್ಲಿ ಉಪ್ಪಿನ ಅಂಶ ಹೆಚ್ಚು ಎನ್ನುವುದು ಮಾತ್ರವಲ್ಲ, ಇದನ್ನು ಹಲವು ದಿನ ಶೇಖರಿಸಿಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದು ಸಹಜ. ಹೊಟ್ಟೆಯುರಿ, ಎದೆಯುರಿ ಇರುವವರು ಉಪ್ಪಿನಕಾಯಿ ಸೇವಿಸದೇ ಇರುವುದೇ ವಾಸಿ ಎನ್ನುವುದು ಅದಕ್ಕೇ.
ಹೆಚ್ಚು ಉಪ್ಪಿನ ಅಂಶ ಸೇವಿಸುವುದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುವುದು. ಇದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದು. ಇದರಿಂದ ಗಂಭೀರ ಖಾಯಿಲೆಗಳು ಬರುವ ಅಪಾಯ ಹೆಚ್ಚು.
ಉಪ್ಪಿನ ಕಾಯಿಯಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಇದು ರಕ್ತದೊತ್ತಡ, ಹೃದಯ ಖಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಾಲಿಗೆಗೆ ಉಪ್ಪಿನಕಾಯಿ ನೆಚ್ಚಿಕೊಳ್ಳುವ ಮೊದಲು ಸ್ವಲ್ಪ ಯೋಚನೆ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ