ಮಾನವನ ದೇಹದ ಶೇ.75ರಷ್ಟು ಭಾಗ ನೀರಿನಿಂದಲೇ ಕೂಡಿದೆ. ಹೀಗಾಗಿ ನೀರು ಮಾನವನ ದೇಹಕ್ಕೆ ಅತೀ ಅವಶ್ಯಕವಾದ ಅಂಶವಾಗಿದೆ.
ಮೆದುಳು, ಚರ್ಮ ಮತ್ತು ಹೃದಯದ ಆರೋಗ್ಯವನ್ನು ನಿಯಂತ್ರಿಸುವುದರಿಂದ ಹಿಡಿದು, ದೇಹದ ಎಲ್ಲಾ ಅಂಗಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ತಜ್ಞರ ಪ್ರಕಾರ ಪುರುಷರು ದಿನಕ್ಕೆ 3.5 ಲೀ ನೀರನ್ನು ಸೇವಿಸಬೇಕು ಹಾಗೂ ಮಹಿಳೆಯರು2.5 ಲೀ ನೀರನ್ನು ಸೇವಿಸಬೇಕು ಎನ್ನುತ್ತಾರೆ.
ಮಾನವನ ದೇಹ ಸರಿಯಾಗಿ ಕೆಲಸ ಮಾಡಬೇಕು. ಆರೋಗ್ಯಯುತವಾಗಿರಬೇಕು ಎಂದರೆ ಸೇವಿಸುವ ಆಹಾರ, ನಿದ್ದೆ ಎಲ್ಲವೂ ಮುಖ್ಯವಾಗಿರುತ್ತದೆ. ಅದರ ಜತೆಗೆ ನೀರು ಸಹ ಅಷ್ಟೇ ಮುಖ್ಯವಾಗಿರುತ್ತದೆ.
ಪ್ರತಿದಿನ ನೀರಿನ ಸೇವನೆಗೂ ಒಂದು ಸಮಯವಿದೆ. ಹಾಗಾದರೆ ನೀರು ಸೇವನೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ನೋಡಿ ಮಾಹಿತಿ
ನಿರಂತರ 7-9ರಿಂದ ಗಂಟೆಗಳ ನಿದ್ದೆಯ ಬಳಿಕ ಬೆಳಗ್ಗೆ ನೀರಿನ ಸೇವನೆಯಿಂದ ದೇಹ ಶುದ್ಧಗೊಳ್ಳುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ನೀರಿನ ಸೇವನೆ ಉತ್ತಮ ಅಭ್ಯಾಸವಾಗಿದೆ. ಅಲ್ಲದೆ ದೇಹದ ಚಯಾಪಚಯ ಕ್ರಿಯೆಯನ್ನು ನೀರು ಸುಲಲಿತವಾಗಿ ನಡೆಯುವಂತೆ ಮಾಡುತ್ತದೆ.
ವ್ಯಾಯಾಮದ ಬಳಿಕ
ವ್ಯಾಯಾಮ ಅಥವಾ ಜಿಮ್ ವರ್ಕೌಟ್ ಬಳಿಕ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಸಂಪೂರ್ಣವಾಗಿ ಕಳೆದುಹೋಗಿರುತ್ತದೆ. ಆದ್ದರಿಂದ ನಿಮ್ಮ ವರ್ಕೌಟ್ ಬಳಿಕ ದೇಹಕ್ಕೆ ಬೇಕಾದಷ್ಟು ನೀರು ನೀಡಿ. ನೆನಪಿಡಿ. ನಿರ್ಜಲೀಕರಣಗೊಂಡ ದೇಹವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ಹೃದಯಕ್ಕೆ ಹಾನಿಯುಂಟು ಮಾಡಬಹುದು. ಹೀಗಾಗಿ ವರ್ಕೌಟ್ ಬಳಿಕ ನೀರು ಸೇವಿಸಿ.
ಊಟದ ಮೊದಲು
ಊಟಕ್ಕೆ ಮೊದಲು ನೀರಿನ ಸೇವನೆ ನಿಮ್ಮ ಅತಿಯಾದ ತೂಕ ಇಳಿಕಗೆ ಸಹಾಯಕವಾಗಿದೆ. ಇದನ್ನು ಪ್ರಿಲೋಡಿಂಗ್ ಎಂದು ಕರೆಯುತ್ತಾರೆ. ಹಸಿವನ್ನು ನೀಗಿಸಿ ಅತಿಯಾಗಿ ತಿನ್ನುವ ಅಭ್ಯಾಸಕ್ಕೆ ನೀರು ಕಡಿವಾಣ ಹಾಕಲಿದೆ. ಹೀಗಾಗಿ ಊಟಕ್ಕೂ ಮೊದಲು ನೀರಿನ ಸೇವನೆ ಉತ್ತಮ.
ರಾತ್ರಿ
ಮಲಗುವ ಮೊದಲು ಸ್ವಲ್ಪವಾದರೂ ನೀರನ್ನು ಕುಡಿಯಿರಿ. ಅದು ನಿಮ್ಮನ್ನು ಆರಾಮದ ನಿದ್ದೆಗೆ ಎಳೆದೊಯ್ಯಲಿದೆ. ದೇಹ ನಿರ್ಜಲೀಕರಣಗೊಂಡಷ್ಟು ನಿದ್ದೆಗೆ ಕಿರಿಕಿರಿಯಾಗಬಹುದು. ಅಲ್ಲದೆ ದೇಹದ ಉಷ್ಣತೆ ಜಾಸ್ತಿಯಾಗಿ ತಲೆನೋವಿನಂತಹ ಸಮಸ್ಯೆಗಳು ಉಲ್ಬಣಿಸಬಹುದು.