ಬಣ್ಣದಿಂದಲೇ ಹೆಸರು ಪಡೆದುಕೊಂಡ ಹಣ್ಣು ಕಿತ್ತಳೆ. ತನ್ನೊಳಗಿನ 8 - 10 ರಸಭರಿತ ತೊಳೆಗಳ ಸಮಾಗಮದಿಂದ ಸ್ವಲ್ಪ ಸಿಹಿ ಸ್ವಲ್ಪ ಹುಳಿ ಮಿಶ್ರಣಗೊಂಡ ಚಳಿಗಾಲದ ಹಣ್ಣಾಗಿ ಕಿತ್ತಳೆ ಎಲ್ಲರ ಕಣ್ಮನ ತಂಪಾಗಿಸುತ್ತದೆ.
ತನ್ನಲ್ಲಿ ಬಗೆ ಬಗೆಯ ವಿಟಮಿನ್ ಗಳು, ಫೈಬರ್ ಅಂಶ ಮತ್ತು ಖನಿಜದ ಅಂಶಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ವೃದ್ಧಿಗೆ ತನ್ನದೇ ಆದ ವಿಶೇಷವಾದ ನಂಟು ಹೊಂದಿದೆ. ಮನುಷ್ಯನು ಸೇವಿಸುವ ಎಲ್ಲ ಬಗೆಯ ಹಣ್ಣುಗಳೂ ಪೌಷ್ಟಿಕ ಸತ್ವಗಳನ್ನು ಒಳಗೊಂಡು ಆರೋಗ್ಯಕ್ಕೆ ಸಕಾರಾತ್ಮಕವಾಗಿ ಪರಿಣಾಮ ಬೀರಿ ಕೆಲಸ ಮಾಡುತ್ತವೆ.
ಕೆಲವು ಹಣ್ಣುಗಳು ಮನುಷ್ಯನ ದೇಹದ ಕೊಬ್ಬಿನ ಅಂಶದ ಕಡಿವಾಣಕ್ಕಾಗಿಯೇ ಅವತಾರ ಎತ್ತಿ ಬಂದ ಹಣ್ಣುಗಳು ಎಂದು ಪ್ರಸಿದ್ಧಿ ಪಡೆದಿವೆ. ಅದರಲ್ಲಿ ಕಿತ್ತಳೆ ಹಣ್ಣುಗಳು ಸಹ ಸೇರಿವೆ. ಇವು ಮಕ್ಕಳಿಂದ ಹಿಡಿದು ವಯಸ್ಕರನ್ನು ಸೇರಿ ವೃದ್ಧರವರೆಗೂ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಹಣ್ಣುಗಳು.
ವರ್ಷ ಪೂರ್ತಿ ಕಾದು ಕೊನೆಗೆ ವರ್ಷದ ಅಂತ್ಯದಲ್ಲಿ ಚಳಿಗಾಲದ ಆರಂಭದಲ್ಲಿ ಜನರಿಗೆ ಕಿತ್ತಳೆ ಹಣ್ಣುಗಳು ತಿನ್ನಲು ಲಭ್ಯವಾಗುತ್ತವೆ. ಇಡೀ ವರ್ಷ ಅದು ಇದು ತಿಂದು ಕೊಬ್ಬಿದ ನಿಮ್ಮ ದೇಹ ವರ್ಷದ ಕೊನೆಯಲ್ಲಿ ಕಿತ್ತಳೆ ಹಣ್ಣಿನಿಂದ ಕರಗುತ್ತದೆ ಎಂದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತೀರಿ. ಹಾಗಾದರೆ ನಿಮ್ಮ ಆಹಾರದಲ್ಲಿ ಕಿತ್ತಳೆ ಹಣ್ಣನ್ನು ಏಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಅರಿವು ನಿಮಗೆ ಈ ಲೇಖನದಲ್ಲಿ ಆಗುತ್ತದೆ.
ಬೊಜ್ಜಿನ ಸಮಸ್ಯೆ
ಕಿತ್ತಳೆ ಹಣ್ಣು ಎಂದ ತಕ್ಷಣ ನಮಗೆ ಮೊದಲು ನೆನಪಿಗೆ ಬರುವ ಒಂದು ಸಂಗತಿಯೆಂದರೆ ಅದರಿಂದ ಬಿಡಿಸಿ ತಿನ್ನುವ ರುಚಿಯಾದ ರಸ ತುಂಬಿದ ಕಿತ್ತಳೆ ತೊಳೆಗಳು. ಅವುಗಳಲ್ಲಿ ಅಪಾರ ಪ್ರಮಾಣದ ನೀರಿನ ಅಂಶ ಇರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ.
•ಕಿತ್ತಳೆ ಹಣ್ಣಿನಲ್ಲಿ ಸುಮಾರು ಶೇಕಡ 87 ರಷ್ಟು ನೀರಿನ ಅಂಶ ಸೇರಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ನೀರು ಕಡಿಮೆ ಕುಡಿಯುತ್ತೇವೆ. ಇಂತಹ ಸಮಯದಲ್ಲಿ ಕಿತ್ತಳೆ ಹಣ್ಣು ಸೇವನೆ ನಮ್ಮ ದೇಹದಲ್ಲಿ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ.
•ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಯಾರಿಗೆ ಆದರೂ ದೇಹದಲ್ಲಿ ಕರುಳಿನ ಚಲನೆ ಬಹಳ ಮುಖ್ಯ. ಕಿತ್ತಳೆ ಹಣ್ಣಿನಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ ನಮ್ಮ ದೇಹದ ಕರುಳಿನ ಚಲನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಸಿವನ್ನು ನೀಗಿಸುವ ಕೆಲಸ ಕಿತ್ತಳೆ ಹಣ್ಣು ಉತ್ತಮವಾಗಿ ನಿರ್ವಹಿಸುತ್ತದೆ.
ಕೊಲೆಸ್ಟ್ರಾಲ್
ಹೆಚ್ಚಿನ ಜನರು ಹೃದ್ರೋಗದಿಂದ ಬಳಲುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ. ಇಂತಹ ಆಹಾರ ಸೇವೆನೆಯಿಂದ ಅಪಧಮನಿ ನಿರ್ಬಂಧಿಸ ಲ್ಪಡುತ್ತದೆ.
ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಅಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ಮೂಳೆಗಳಿಗೆ ಸಹಕಾರಿ. ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡಿದರೆ ಅದು ಅಸ್ಥಿರಂಧ್ರತೆ ಸಮಸ್ಯೆಯಿಂದ ದೂರ ಮಾಡುವುದು.
ರೋಗನಿರೋಧಕ ಶಕ್ತಿ ಹೆಚ್ಚಿಸಲು
ಒಂದು ಮಧ್ಯಮ ಗಾತ್ರದ ಕಿತ್ತಳೆ ಹಣ್ಣು, ತನ್ನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ 72% ವಿಟಮಿನ್-ಸಿ ಅಂಶವನ್ನು ಒಳಗೊಂಡಿದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಅನುಕೂಲಕರವಾಗಿರುತ್ತದೆ.
ಹಲವು ಜನರಿಗೆ ಬೊಜ್ಜಿನ ಸಮಸ್ಯೆ ಇರುವ ಕಾರಣದಿಂದ ತಮ್ಮ ಸಮಸ್ಯೆಯನ್ನು ಸುಲಭವಾಗಿ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆ ಕೂಡ ಇದರಿಂದ ಪರಿಹಾರವಾಗುತ್ತದೆ ಎಂದು ತಿಳಿದುಬಂದಿದೆ.