ರಾಜ್ಯದಲ್ಲಿ ಕರೋನಾ ವೈರಸ್ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 76 ವರ್ಷದ ವೃದ್ಧ ಸಾವನ್ನಪ್ಪಿದ್ದು, ಕಲಬುರಗಿಯಿಂದ ಹೈದ್ರಾಬಾದ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾಗ ನಿಧನರಾಗಿದ್ದಾರೆ.
ಹೈದರಾಬಾದ್ ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ತೆಗೆದುಕೊಳ್ಳದೇ ಇದ್ದ ಹಿನ್ನೆಲೆಯಲ್ಲಿ ನಿಧನ ಹೊಂದಿದ್ದಾರೆ. ಆ ಬಳಿಕ ಶವವನ್ನು ಕಲಬುರ್ಗಿಗೆ ವಾಪಸ್ ತರಲಾಗಿತ್ತು.
ಕೆಮ್ಮು, ಕಫ ಮತ್ತು ಜ್ವರದ ಹಿನ್ನೆಲೆಯಲ್ಲಿ ವೃದ್ಧನ ಗಂಟಲ ದ್ರವ ಸಂಗ್ರಹಿಸಲಾಗಿತ್ತು. ಪರೀಕ್ಷೆಗೆಂದು ಗಂಟಲ ದ್ರವ ಬೆಂಗಳೂರಿಗೆ ಕಳುಹಿಸಲಾಗಿತ್ತು. ವರದಿ ಇಂದು ಸಂಜೆ ಬರೋ ಸಾಧ್ಯತೆ ಇದೆ.
ಕಲಬುರಗಿಯ ಮೋಮಿನಪುರದ ಮಹ್ಮದ್ ಹುಸೇನ್ ಸಿದ್ಧಕಿ ಮೃತ ವ್ಯಕ್ತಿಯಾಗಿದ್ದಾರೆ. ಉಮ್ರಾ ಯಾತ್ರೆಗಾಗಿ ಸೌದಿಗೆ ಹೋಗಿದ್ದರು.
ಸೌದಿಯಿಂದ ವಾಪಸ್ಸಾದ ಬಳಿಕ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಗಂಟಲ ದ್ರವ ಸಂಗ್ರಹಿಸಿದ ನಂತರ ಚಿಕಿತ್ಸೆ ಮುಂದುವರಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೈದರಾಬಾದ್ ಗೆ ಒಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ವೃದ್ಧ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವ ಮಹ್ಮದ್ ಹುಸೇನ್ ಸಿದ್ಧಕಿ ಕಲಬುರಗಿಯ ಜಿಮ್ಸ್ ನಲ್ಲಿ ಸಾವನ್ನಪ್ಪಿಲ್ಲ. ಇಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳದೇ ಹೈದ್ರಾಬಾದ್ ಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಶವವನ್ನು ಕಲಬುರಗಿಯ ಜಿಮ್ಸಗೆ ತರಲಾಗಿತ್ತು. ಶವವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮಹ್ಮದ್ ಸಿದ್ಧಕಿ ಸಾವಿಗೆ ಕೊರೊನಾ ವೈರಸ್ ಕಾರಣವೇ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎ.ಎಸ್.ರುದ್ರವಾಡಿ ಸ್ಪಷ್ಟಪಡಿಸಿದ್ದಾರೆ.