ಬೆಂಗಳೂರು : ಈಗಿನ ಮಕ್ಕಳಿಗೆ ಊಟ ಮಾಡುವುದೆಂದರೆ ಆಗುವುದಿಲ್ಲ. ತಾಯಿ ತಟ್ಟೆಯಲ್ಲಿ ಊಟ ತಂದ ತಕ್ಷಣ ಅಲ್ಲಿಂದ ಓಡಿ ಹೋಗುತ್ತಾರೆ. ಈಗಿನ ತಾಯಂದಿರಿಗೆ ತಮ್ಮ ಮಕ್ಕಳಿಗೆ ಊಟ ಮಾಡಿಸೋದೆ ಒಂದು ಸಾಹಸದ ಕೆಲಸವಾಗಿಬಿಟ್ಟಿದೆ. ಇದಕ್ಕೆ ಕಾರಣ ಮಕ್ಕಳಿಗೆ ಹಸಿವು ಆಗದೆ ಇರುವುದು. ಮಕ್ಕಳಿಗೆ ಹಸಿವಾಗಿ ಚೆನ್ನಾಗಿ ಊಟ ಮಾಡಬೇಕೆಂದರೆ ಈ ಎರಡು ಮನೆಮದ್ದುಗಳಲ್ಲಿ ಒಂದನ್ನು ಬಳಸಿ. ಆಗ ನಿಮ್ಮ ಮಕ್ಕಳು ಚೆನ್ನಾಗಿ ಊಟಮಾಡುತ್ತಾರೆ.
ಒಣ ಶುಂಠಿ, ಜೀರಿಗೆ, ಓಂಕಾಳು ಮೂರನ್ನು ಬೇರೆಬೇರೆಯಾಗಿ ಬಾಣಲೆಯಲ್ಲಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಒಣಶುಂಠಿ ಪುಡಿ 2 ಚಮಚ, ಜೀರಿಗೆ ಪುಡಿ 1 ಚಮಚ, ಓಂಕಾಳು ಪುಡಿ 1 ಚಮಚ ಹಾಗು 1 ಚಿಟಿಕೆ ಕಲ್ಲುಪ್ಪಿನ ಪುಡಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಇದನ್ನು ಪ್ರತಿಸಲ ಊಟಕ್ಕೆ 5 ನಿಮಿಷದ ಮೊದಲು ¼ ಚಮಚದಷ್ಟು ಬಿಸಿ ಅನ್ನಕ್ಕೆ ಹಾಕಿ ಜೊತೆಗೆ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಮಗುವಿಗೆ ತಿನಿಸಿ. ನಂತರ ಊಟ ಮಾಡಿಸಿ. ದಿನಕ್ಕೆ 2 ಬಾರಿ ಊಟ ಅಥವಾ ತಿಂಡಿಯಲ್ಲಿ ಹೀಗೆ ಕೊಡಿ. ಇದನ್ನು 10 ದಿನ ಮಾಡಿದರೆ ಅವರಿಗೆ ಜೀರ್ಣಶಕ್ತಿ ಜಾಸ್ತಿಯಾಗುವುದರ ಜೊತೆಗೆ ಹಸಿವು ಕೂಡ ಹೆಚ್ಚಾಗುತ್ತದೆ.
ಮೇಲೆ ಹೇಳಿರುವ ಪುಡಿಗಳನ್ನು ಮಾಡಲು ಆಗದವರು ಈ ಮನೆಮದ್ದನ್ನು ಬಳಸಬಹುದು. ಹಸಿಶುಂಠಿ ರಸ ¼ ಚಮಚ, ನಿಂಬೆರಸ ¼ ಚಮಚ, ½ ಚಮಚ ಜೇನುತುಪ್ಪ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಊಟ ಅಥವಾ ತಿಂಡಿಗಿಂತ 1 ಗಂಟೆ ಮುಂಚೆ ತಿನ್ನಿಸಿ. ಇದನ್ನು ಪ್ರತಿದಿನ 1 ಅಥವಾ 2 ಬಾರಿ ಮಾಡಿ ತಿನ್ನಿಸಿ. ಹೀಗೆ ಮಾಡಿದರೆ ಅವರಿಗೆ ಜೀರ್ಣಶಕ್ತಿ ಜಾಸ್ತಿಯಾಗುವುದರ ಜೊತೆಗೆ ಹಸಿವು ಕೂಡ ಹೆಚ್ಚಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ