ಉಬ್ಬಸ, ವೇಗವಾದ ಹೃದಯ ಬಡಿತಗಳು, ಗಂಟಲಿನಲ್ಲಿ ಊರಿಯೂತ, ಇತ್ಯಾದಿಗಳು ಅಸ್ತಮಾದ ಸಾಮಾನ್ಯ ಲಕ್ಷಣಗಳಾಗಿವೆ. ಅಸ್ತಮಾ ಸಮಸ್ಯೆಯು ಸುಮಾರಾಗಿ ಬೆಳಿಗ್ಗೆ ಮತ್ತು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆಯಿಂದಾಗಿ ಸುಮಾರು 2.5 ಲಕ್ಷ ಜನರು ಪ್ರತಿವರ್ಷ ಮರಣಹೊಂದುತ್ತಿದ್ದಾರೆ. ಯೋಗ, ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಪರ್ಯಾಯ ಔಷಧಗಳಿಂದ ಈ ರೋಗವನ್ನು ನಿಯಂತ್ರಿಸಿ ಗುಣಪಡಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ನಾವು ಪ್ರತಿದಿನ ಬಳಸುವ ಎಷ್ಟೋ ಪದಾರ್ಥಗಳನ್ನೇ ಆಯುರ್ವೇದದ ಔಷಧಗಳಲ್ಲಿ ಬಳಸುತ್ತಾರೆ. ಹಾಗಾಗಿ ಮನೆಯಲ್ಲಿ ನಾವು ದಿನನಿತ್ಯ ಬಳಸುವ ಪದಾರ್ಥಗಳಿಂದ ಅಸ್ತಮಾ ಸಮಸ್ಯೆಯನ್ನು ಹೇಗೆ ಗುಣಪಡಿಸಬಹುದು ಎಂಬುದನ್ನು ನೋಡೋಣ.
*ದಾಲ್ಚಿನಿ ಮತ್ತು ಜೇನು - ಒಂದು ಕಪ್ ಕುದಿಯುವ ನೀರಿಗೆ ಒಂದು ಚಮಚ ದಾಲ್ಚಿನಿ ಹಾಕಿ 15 ನಿಮಿಷ ಕುದಿಸಿ ಮತ್ತು ಅದಕ್ಕೆ 1-2 ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಕುಡಿದರೆ ನಿಮ್ಮ ಅಸ್ತಮಾ ಸಮಸ್ಯೆಯು ಬೇಗನೆ ಗುಣವಾಗಬಹುದಾಗಿದೆ.
*ಲೈಕೋರೈಸ್ ಮತ್ತು ಶುಂಠಿ - ಪ್ರತಿದಿನ ಅರ್ಧ ಚಮಚ ಲೈಕೋರೈಸ್ ಮತ್ತು ಅರ್ಧ ಚಮಚ ಶುಂಠಿಯನ್ನು ಹಾಕಿದ ಚಹಾವನ್ನು ಕುಡಿದರೆ ಅಸ್ತಮಾ ರೋಗಲಕ್ಷಣಗಳು ಕಡಿಮೆಯಾಗುತ್ತದೆ.
*ಲವಂಗದ ಎಲೆ, ನಿಂಬೆ ಮತ್ತು ಶುಂಠಿ ಚಹಾ - ಇವುಗಳು ಅಸ್ಥಮಾ ಸಮಸ್ಯೆಗೆ ನೈಸರ್ಗಿಕವಾದ ಹಾಗೂ ಅತ್ಯುತ್ತಮ ಔಷಧವಾಗಿದೆ. ಒಂದು ಲೋಟ ನೀರಿಗೆ ಅರ್ಧ ಇಂಚು ಶುಂಠಿ ಮತ್ತು ಒಂದು ಇಂಚು ಲವಂಗದ ಎಲೆಯನ್ನು ಹಾಕಿ ಕುದಿಸಿ. ನಂತರ ಅದಕ್ಕೆ ಒಂದು ಚಮಚ ಟೀ ಪುಡಿಯನ್ನು ಹಾಕಿ 3-4 ನಿಮಿಷ ಕುದಿಸಿ. ಸೋಸಿದ ಚಹಾಕ್ಕೆ 3-4 ಹನಿ ನಿಂಬೆ ರಸ ಮತ್ತು ಒಂದು ಚಿಟಿ ಕಲ್ಲುಪ್ಪನ್ನು ಬೇಕಾದಲ್ಲಿ ಸೇರಿಸಿಕೊಳ್ಳಿ. ನಿಮಗೆ ಚಹಾದಲ್ಲಿ ಸಿಹಿ ಬೇಕಿದ್ದರೆ ಜೇನು ಅಥವಾ ಸಕ್ಕರೆಯನ್ನು ಹಾಕಿಕೊಳ್ಳಬಹುದು. ಇದನ್ನು ದಿನವೂ 2-3 ಬಾರಿ ಕುಡಿದರೆ ಒಳ್ಳೆಯದು.
*ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ - 7-8 ಬೆಳ್ಳುಳ್ಳಿ ಎಸಳುಗಳನ್ನು ರುಬ್ಬಿ ಅದನ್ನು 1/2 ಚಮಚ ಸಾಸಿವೆ ಎಣ್ಣೆಯೊಂದಿಗೆ ಬಿಸಿಯಾದ ಅನ್ನಕ್ಕೆ ಹಾಕಿಕೊಂಡು ತಿಂದರೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ ರಕ್ತದ ದಟ್ಟಣೆಯನ್ನು ನಿವಾರಿಸುತ್ತದೆ ಮತ್ತು ಸಾಸಿವೆ ಎಣ್ಣೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
*ಹಾಲು ಮತ್ತು ಬೆಣ್ಣೆ - ಇದು ಅಸ್ತಮಾಗೆ ಉತ್ತಮ ಪರಿಹಾರವಾಗಿದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಬೆಣ್ಣೆಯನ್ನು ಸೇರಿಸಬೇಕು. ಅದು ಕರಗಿದಾಗ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಲಗುವ ಸಮಯದಲ್ಲಿ ಇದನ್ನು ಕುಡಿದು ಮಲಗಿದರೆ ಅದು ಗಂಟಲ ಒಳಗಿನ ಉರಿಯನ್ನು ಕಡಿಮೆ ಮಾಡುತ್ತದೆ.
*ಈರುಳ್ಳಿ - ಒಂದು ಈರುಳ್ಳಿಯನ್ನು ರುಬ್ಬಿ ಅದರ ರಸವನ್ನು ತೆಗೆಯಿರಿ. ಅದಕ್ಕೆ ಎರಡರಿಂದ ಮೂರು ಚಮಚ ನೀರನ್ನು ಸೇರಿಸಿ. ನಂತರ 4 ಚಮಚ ನಿಂಬೆ ರಸ ಮತ್ತು 2 ಚಮಚ ಜೇನನ್ನು ಸೇರಿಸಿ ಮಿಕ್ಸ್ ಮಾಡಿ. ಇದನ್ನು ಬೆಚ್ಚಗಾಗುವವರೆಗೆ ಬಿಸಿ ಮಾಡಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ.
*ಅರಿಶಿಣ, ಕಾಳುಮೆಣಸು ಮತ್ತು ಜೇನನ್ನು ಸೇರಿಸಿದ ಹಾಲು - ಒಂದು ಕಪ್ ಹಾಲಿಗೆ ಅರ್ಧ ಚಮಚ ಅರಿಶಿಣ, 2-3 ಚಮಚ ಜೇನು ಮತ್ತು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುದಿಸಿ. ಇದನ್ನು ದಿನವೂ ಬಿಸಿ ಬಿಸಿಯಾಗಿ ಕುಡಿಯಬೇಕು.
*ತುಳಸಿ ರಸ ಮತ್ತು ಜೇನು - ಒಂದು ಹಿಡಿ ತಾಜಾ ತುಳಸಿ ಎಲೆಗಳನ್ನು ರುಬ್ಬಿ ಅದರ ರಸವನ್ನು ಬೇರ್ಪಡಿಸಿಕೊಳ್ಳಿ. ನಂತರ ಅದರಲ್ಲಿ 2 ಚಮಚ ಜೇನನ್ನು ಮಿಕ್ಸ್ ಮಾಡಿಕೊಂಡು ಸೇವಿಸಿ. ಇದು ಅಸ್ತಮಾಗೆ ಅತ್ಯುತ್ತಮ ಔಷಧವಾಗಿದ್ದು ತಕ್ಷಣಕ್ಕೆ ಆರಾಮವನ್ನು ಹೊಂದಲು ದಿನಕ್ಕೆ ಕನಿಷ್ಟ 2-3 ಬಾರಿ ಇದನ್ನು ಸೇವಿಸಿ.
ನೀವೂ ಸಹ ಅಸ್ತಮಾದಿಂದ ಬಳಲುತ್ತಿದ್ದರೆ ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ.