ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೇಳುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಅವಧಿಯನ್ನು 1 ದಿನ ಕಡಿತಗೊಳಿಸಿದ ಚುನಾವಣಾ ಆಯೋಗದ ಕ್ರಮಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿ ರೋಡ್ ಷೋ ನಡೆಸಿದ ಸಂದರ್ಭದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆ, ಮಾರಾಮಾರಿ ನಡೆದಿತ್ತು. ಈ ಕಾರಣದಿಂದ ಆಯೋಗವು ತನ್ನ ಸಾಂವಿಧಾನಿಕ ವಿಶೇಷ ಹಕ್ಕನ್ನು ಪ್ರಯೋಗಿಸಿ ಮೇ 17 ರ ಸಂಜೆ 6 ಗಂಟೆಗೆ ತೆರೆ ಎಳೆಯಬೇಕಾಗಿದ್ದ ಬಹಿರಂಗ ಪ್ರಚಾರಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಮೇ 16 ರ ರಾತ್ರಿ 10 ಗಂಟೆಗೆ ನಿಲ್ಲಿಸುವಂತೆ ಆದೇಶಿಸಿದೆ.
ಚುನಾವಣಾ ಆಯೋಗದ ಈ ಕ್ರಮವನ್ನು ಖಂಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇಲ್ಲವೇ ಇಲ್ಲ. ಹಾಗಿದ್ದರೂ 324ನೇ ವಿಧಿಯ ಅನ್ವಯ ಆಯೋಗ ಕ್ರಮ ಕೈಗೊಂಡಿದೆ. ಆಯೋಗದ ಈ ಕ್ರಮ ಅಸಾಂವಿಧಾನಿಕ ಮತ್ತು ಅನೈತಿಕ. ಕೇವಲ ಬಿಜೆಪಿಗೆ ಅನುಕೂಲ ಮಾಡಿಕೊಡುವ ಕಾರಣದಿಂದಲೇ ಆಯೋಗ ಈ ಕ್ರಮ ಕೈಗೊಂಡಿದೆ. ಇದು ಬಿಜೆಪಿಗೆ ಆಯೋಗ ನೀಡಿರುವ ಉಡುಗೊರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ