Publish Date: Fri, 10 Jul 2026 (13:35 IST)
Updated Date: Fri, 10 Jul 2026 (13:40 IST)
ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲು ಗಂಡನಾದವನು ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳಿವೆ. ಇದರಿಂದ ಹೊಸದಾಗಿ ಮದುವೆಯಾದ ನಿಮ್ಮ ಪತ್ನಿ ಖುಷಿಯಾಗಿರುತ್ತಾರೆ ಮತ್ತು ನಿಮ್ಮ ಮುಂದಿನ ಜೀವನ ಚೆನ್ನಾಗಿರುತ್ತದೆ.
ಮದುವೆಯಾಗಿ ಬರುವ ಹೆಣ್ಣು ಗಂಡನನ್ನೇ ನಂಬಿ ತನ್ನವರನ್ನೆಲ್ಲಾ ಬಿಟ್ಟು ಹೊಸ ಮನೆಗೆ ಕಾಲಿಡುತ್ತಾಳೆ. ಹೀಗಾಗಿ ಆಕೆಯನ್ನು ಮನೆಯವರ ಜೊತೆ ಬೆರೆಸುವ ಮತ್ತು ಹೊಸ ಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡುವ ಹೊಣೆ ಗಂಡನದ್ದಾಗಿರುತ್ತದೆ. ಇದಕ್ಕಾಗಿ ಈ ಕೆಲವು ಟಿಪ್ಸ್ ಪಾಲಿಸಿ
ಹೇಳುವುದು-ಕೇಳುವುದು ಎರಡೂ ಇರಲಿ
ಪ್ರತಿನಿತ್ಯ ಆಕೆಗೆ ನಿನ್ನ ಇಂದಿನ ದಿನ ಹೇಗಾಯ್ತು ಎಂದು ಅವಳು ಹೇಳುವ ಎಲ್ಲಾ ಕಷ್ಟ-ಸುಖಗಳನ್ನು ಕೇಳುವ ತಾಳ್ಮೆಯಿರಲಿ. ಜೊತೆಗೆ ಆಕೆಗೆ ನಿಮ್ಮ ಮನೆಯವರ ಸ್ವಭಾವಗಳೇನು ಹೇಗಿದ್ದರೆ ಎಲ್ಲರಿಗೂ ಇಷ್ಟ ಎಂಬುದನ್ನು ತಿಳಿ ಹೇಳಿ.
ಪ್ರೀತಿ ತೋರಿಸಿ
ಪ್ರೀತಿ ಎಂದರೆ ಕೇವಲ ದೈಹಿಕ ಸಂಬಂಧವಲ್ಲ. ಆಕೆಗೆ ತವರು ಮನೆ ಮಿಸ್ ಆಗದಂತೆ ಆಕೆಯ ಮನೆಯವರ ಜೊತೆ ಪ್ರತಿನಿತ್ಯ ಮಾತನಾಡಲು ಅವಕಾಶ ಮಾಡಿಕೊಡಿ. ಆ ಸಮಯದಲ್ಲಿ ಆಕೆಗೆ ಏಕಾಂತ ಕೊಡಿ. ಆಕೆ ಅಡುಗೆ ಮಾಡುವಾಗ ಸಹಾಯ ಮಾಡಿ. ಬೆಳಿಗ್ಗೆ ಒಂದು ಕಪ್ ಕಾಫಿ ನೀವೇ ತಯಾರಿಸಿ ಕೊಡಿ. ಒಂದು ನವಿರಾದ ಅಪ್ಪುಗೆ, ಕೈ ಹಿಡಿದು ಬೆಚ್ಚನೆಯ ಸ್ಪರ್ಶ ನೀಡಿ.
ಹಣಕಾಸಿನ ವಿಚಾರದಲ್ಲಿ ನಂಬಿಕೆಯಿರಲಿ
ಪತ್ನಿ ಉದ್ಯೋಗಸ್ಥೆಯಾಗಿದ್ದರೆ ಆಕೆಯ ಹಣಕಾಸಿನ ಮೇಲೆ ಹಿಡಿತ ಸಾಧಿಸುವ ಅಥವಾ ಆಕೆಯ ಆದಾಯವೆಷ್ಟು, ಖರ್ಚೆಷ್ಟು ಎಂದು ಪದೇ ಪದೇ ಕೇಳುವುದು, ಅನುಮಾನಿಸುವುದು ಮಾಡಬೇಡಿ. ಆಕೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿ. ಇದರಿಂದ ಆಕೆ ತಾನಾಗಿಯೇ ಮನೆಯ ಖರ್ಚಿಗೆ ಜೊತೆಯಾಗುವ ಮನಸ್ಸು ತೋರುತ್ತಾಳೆ.
ಡೇಟಿಂಗ್ ಮಾಡುತ್ತಿರಿ
ಮದುವೆಯಾದ ಮೇಲೆ ಎಲ್ಲಾ ಮುಗಿಯಿತು ಎಂಬ ಭಾವನೆ ಬೇಡ. ವೀಕೆಂಡ್ ಗಳಲ್ಲಿ ಒಂದು ಲಾಂಗ್ ಡ್ರೈವ್ ಇಲ್ಲವೇ ಒಂದು ಡಿನ್ನರ್ ಡೇಟ್ ಮಾಡಿ. ಆ ಸಮಯದಲ್ಲಿ ಸಿಗುವ ಏಕಾಂತ ಆಕೆಗೆ ನಿಮ್ಮನ್ನು ಮತ್ತು ನಿಮಗೆ ಆಕೆಯನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಅನುಕೂಲ ಮಾಡಿಕೊಡುತ್ತದೆ.
ಪರಸ್ಪರ ಗೌರವ ಮತ್ತು ಸ್ಥಾನ
ಹೆಂಡತಿ ಎಂದ ಮಾತ್ರಕ್ಕೆ ನಾನು ಹೇಳಿದಂತೆ ಕೇಳಬೇಕು, ಎಲ್ಲವೂ ನಾನು ಅಂದುಕೊಂಡಂತೆ ಇರಬೇಕು ಎಂಬ ಅಹಂ ಬೇಡ. ಆಕೆ ಮದುವೆಗೆ ಮೊದಲು ಎಷ್ಟು ಫ್ರೀ ಆಗಿದ್ದಳೋ ಅದೇ ಸುರಕ್ಷತೆ, ಮುಕ್ತ ವಾತಾವರಣದಲ್ಲಿರುವ ಆಕೆಗೆ ಅವಕಾಶ ಕೊಡಿ. ಯಾವುದೇ ಸಂಬಂಧವಿರಲಿ, ನೀವು ಹಿಡಿದಿಟ್ಟುಕೊಂಡಷ್ಟು ಉಸಿರು ಕಟ್ಟಿದಂತಾಗುತ್ತದೆ. ಆಕೆಗೆ ನಿಮ್ಮ ಜೀವನದಲ್ಲಿ ಮತ್ತು ಮನೆಯಲ್ಲಿ ವಿಶೇಷ ಸ್ಥಾನವಿದೆ ಎಂಬ ಭಾವನೆ ಬರುವಂತೆ ನಡೆದುಕೊಳ್ಳಿ. ಆಕೆಯ ಮನೆಯವರನ್ನು, ಆಪ್ತರನ್ನು ನಿಮ್ಮವರೆಂದುಕೊಳ್ಳಿ, ಅಷ್ಟೇ ಗೌರವ, ಆತ್ಮೀಯತೆಯಿಂದ ಕಾಣಿ. ಇದರಿಂದ ಆಕೆಯೂ ನಿಮ್ಮ ಮನೆಯವರನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳುತ್ತಾಳೆ.