ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 27ನೇ ತಾರೀಕಿನಿಂದ ಮೇ 10 ನೇ ತಾರೀಕಿನ ತನಕ ಲಾಕ್ಡೌನ್ ಹೇರಲಾಗಿತ್ತು. ಆದರೆ ಇಷ್ಟಾದರೂ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿವಾಣಕ್ಕೆ ಬಾರದ ಕಾರಣ ಮತ್ತೆ ಮೇ 24 ರ ತನಕ ಲಾಕ್ಡೌನ್ ಅನ್ನು ರಾಜ್ಯ ಸರ್ಕಾರ ವಿಸ್ತರಿಸಿತ್ತು. ಅದಾದ ನಂತರ ಕೊಂಚ ರಿಲೀಫ್ ನೀಡಿದ್ದ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ನಿಯಮಗಳನ್ನು ಜಾರಿಗೆ ತಂದಿತ್ತು. ಇದೀಗ ಜುಲೈ 5 ರಿಂದ ಅನ್ಲಾಕ್ 3.0 ಮಾಡಲು ಹೊರಟಿರುವ ಸರ್ಕಾರ ಕೆಲವು ನಿರ್ಭಂದಗಳೊಂದಿಗೆ ಅನ್ಲಾಕ್ ಘೋಷಣೆ ಮಾಡಿದೆ.
ಅದರಂತೆ ಇಂದಿನಿಂದ ಇಡೀ ರಾಜ್ಯ ಎಂದಿನಂತೆ ಸಹಜವಾಗಿ ಇರಲಿದ್ದು, ಎಲ್ಲಾ ಚಟುವಟಿಕೆಗಳು ಕಾರ್ಯನಿರ್ವಹಿಸಲಿವೆ. ಆದರೆ, ಈ ಅವಕಾಶ ಅಥವಾ ಅನುಮತಿ ಕೇವಲ 14 ದಿನಗಳ ಕಾಲ ಮಾತ್ರ ಇರಲಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ಈ ಸಮಯದಲ್ಲಿ ಹೆಚ್ಚಾದ್ದಲ್ಲಿ ಮತ್ತೆ ಹಿಂದಿನ ನಿರ್ಬಂಧಗಳು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರಲಿವೆ.
ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರ (ಜುಲೈ 05)ದ ಬೆಳಿಗ್ಗೆ 5 ಗಂಟೆಯಿಂದ (ಜುಲೈ19) ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಗೆ ಬರುವಂತೆ ಒಂದಷ್ಟು ಸಡಿಲಿಕೆಗಳು ಹಾಗೂ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.