Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಾಳೆಯಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಆದರೆ ಅದಕ್ಕೂ ಒಂದು ದಿನ ಮೊದಲೇ ನಟ-ನಿರ್ದೇಶಕ-ನಿರ್ಮಾಪಕ ರಿಷಬ್ ಶೆಟ್ಟಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ರಿಷಬ್ ಹೀಗೆ ಬೇಸರಗೊಳ್ಳಲು ಕಾರಣ ಈ ಸಲದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ನಿರ್ಮಾಣದ 'ಪೆದ್ರೊ' ಆಯ್ಕೆ ಆಗದಿರುವುದು. ಆ ಬಗ್ಗೆ ಅವರು ತಮ್ಮ ಬೇಸರವನ್ನು ಅಧಿಕೃತವಾಗಿ ಲಿಖಿತ ರೂಪದಲ್ಲೇ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲ್ಮ್ಸ್ ಎಂಬ ತಮ್ಮ ನಿರ್ಮಾಣ ಸಂಸ್ಥೆಯ ಅಧಿಕೃತ ಲೆಟರ್ ಹೆಡ್ ಮೂಲಕ ತಮ್ಮ ಅನಿಸಿಕೆಯನ್ನು ಅವರು ಹೇಳಿಕೊಂಡಿದ್ದಾರೆ.
'ನಮ್ಮ ನಿರ್ಮಾಣದ ಪೆದ್ರೊ ಸಿನಿಮಾ ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು, ವಿಮರ್ಶಕರಿಂದಲೂ ಪ್ರಶಂಸೆ ಪಡೆದಿದೆ. ಆದರೆ ಪೆದ್ರೊ ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ..' ಎಂದು ಬರೆದುಕೊಂಡಿರುವ ಅವರು ಇದರಿಂದ ತಮಗೆ ಬೇಸರವಾಗಿದ್ದರೂ, ಆ ನೋವನ್ನು ನುಂಗಿಕೊಂಡು ತಮ್ಮ ಪೆದ್ರೊ ಚಿತ್ರವನ್ನು ಸಿನಿಪ್ರಿಯರಿಗೆ ತಲುಪಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.