Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವತಂತ್ರ ಬಾಲ್ಯವು...ಸ್ವಾತಂತ್ರ್ಯ ದಿನಾಚರಣೆಯು...!!

ಸ್ವತಂತ್ರ ಬಾಲ್ಯವು...ಸ್ವಾತಂತ್ರ್ಯ ದಿನಾಚರಣೆಯು...!!
ಬೆಂಗಳೂರು , ಮಂಗಳವಾರ, 14 ಆಗಸ್ಟ್ 2018 (15:30 IST)
-ಸಮರ್ಥ ಶೆಟ್ಟಿ, ಯಡ್ತಾಡಿ
 
ಅದೊಂದು ಬಾಲ್ಯವಿತ್ತು ಅದಕ್ಕೆ ಯಾವ ಪರಿಧಿಯು ಇರಲಿಲ್ಲ. ಯಾವ ಗೊಡವೆಯು ಇಲ್ಲದ ಸ್ವತಂತ್ರ ಪಕ್ಷಿಗಳು ನಾವಾಗಿದ್ದೇವು. ಒಮ್ಮೆ ನಾವು ಕುಳಿತು ನೆನಪುಗಳನ್ನು ಮೆಲುಕು ಹಾಕಲು ಹೊರಟರೆ ಕಾಡುವುದೇ ಮತ್ತೆಂದು ಮರಳಿ ಬಾರದ ಬಾಲ್ಯದ ನೆನಪು.
 
ಆಗಸ್ಟ್ ಹದಿನೈದು ನಮ್ಮ ರಾಷ್ಟ್ರಹಬ್ಬ...ಆ ದಿನದ ಸಡಗರ, ಸಂಭ್ರಮ, ಪೂರ್ವ ತಯಾರಿ ಪದಗಳಿಗೆ ನಿಲುಕದ್ದು. ಅಂದು ನಮಗೆ ಸ್ವಾತಂತ್ರ್ಯದ ಅರ್ಥ ಗೊತ್ತಿರಲಿಲ್ಲ. ಆದರೆ ಎಂದು ಆಚರಣೆ ತಪ್ಪಿದವರಲ್ಲ.
 
ನಾನು ಕಲಿತದ್ದೆಲ್ಲಾ ಪಟ್ಟಣದ ಯಾವ ಸೊಗಡು ಇಲ್ಲದ ತೀರ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ. ಇರುವ ವ್ಯವಸ್ಥೆಯ ಒಳಗೆ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುವುದು ಆಗಿನ ಶಿಕ್ಷಕರಿಗೆ ಸವಾಲೇ ಸರಿ. ರಾಷ್ಟ್ರಹಬ್ಬಕ್ಕೆ ಹದಿನೈದು ದಿನವಿರುವಾಗಲೇ ನಮ್ಮ ತಯಾರಿಗಳೆಲ್ಲ ಪ್ರಾರಂಭವಾಗುತ್ತಿದ್ದವು. ಕೊನೆಯ ಆಟದ ಪಿರೆಡನ್ನು ಕಸಿದು ಪಥಸಂಚಲನದ ತಾಲೀಮು ಆದರು ಅಲ್ಲೋನೊ ಮಜವಿತ್ತು. ಏನೋ ಒಂದು ಶಿಸ್ತನ್ನು ಕಲಿತಾ ಇದ್ದೀವಿ ಅನ್ನೊ ಹಮ್ಮಿತ್ತು.
webdunia
ತರಗತಿಗೆ ಒಬ್ಬರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಲು ಅವಕಾಶ, ದೇಶಭಕ್ತಿ ಗೀತೆ ಹಾಡಲು ಕೆಲವರಿಗೆ ತಾಕೀತು. ಅವರು ಕಂಠಪಾಠ ಮಾಡುವ ಪಾಡು ಏಣಿಸಿದ್ರೆ ಇಂದು ನಗು ಉಕ್ಕಿ ಬರುತ್ತೆ.
 
ಅಂತು ಎಲ್ಲಾ ತಯಾರಿ ಮುಕ್ತಾಯ ಹಂತಕ್ಕೆ ತಲುಪುವಷ್ಟರಲ್ಲಿ ಬಂದೇ ಬಿಡುತ್ತಿತ್ತು ಆಗಸ್ಟ್ ಹದಿನೈದು. ಅಂದು ಬೆಳಿಗ್ಗೆ ಬೇಗ ಎದ್ದು ಅಮ್ಮ ಗಡಿಬಿಡಿಗೆ ಮಾಡಿದ ಕಾಂಕ್ರೀಟು ತಿಂದು, ಸ್ನಾನ ಮುಗಿಸಿ ಖಾಕಿ ಚಡ್ಡಿ ಬಿಳಿ ಅಂಗಿ ತೊಟ್ಟು ಹೊರಟರೆ ಯಾವ ಶಿಸ್ತಿನ ಸಿಪಾಯಿಗು ಕಡಿಮೆ ಇಲ್ಲದ ಗತ್ತು. ಅಲ್ಲೆ ಅಂಗಡಿಯಲ್ಲಿ ಖರೀದಿ ಮಾಡುವ  ಆ ಬಾವುಟ ಹಿಡಿದಾಗ ಏನೋ ಪುಳಕ. ಶಾಲೆಗೆ ಬೇಗ ಹೋಗಿ ಶಾಲಾವಠಾರ ಸ್ವಚ್ಛಗೊಳಿಸಿ ಧ್ವಜಸ್ತಂಭದ ಬಳಿ ರಂಗೋಲಿ ಇಡುವುದು. ಇಷ್ಟೆಲ್ಲಾ ಖುಷಿಗೆ ಮುಖ್ಯ ಕಾರಣ ಕೊನೆಯಲ್ಲಿ ಮೈಸೂರು ಪಾಕೋ,ಲಡ್ಡೋ ಸಿಗುತ್ತೆ ಅನ್ನುವ ಆಸೆಗೆ. ಅಂತು ಪಿ.ಟಿ ಟೀಚರ್ ವಿಷಲ್ ಶಬ್ಧಕ್ಕೆ ಎಲ್ಲರು ತರಗತಿ ಪ್ರಕಾರ ಸಾಲುಗಟ್ಟಿ ನಿಲ್ಲುವುದು. ಅಂದು ಅರ್ಥವೇ ಆಗದ ಅತಿಥಿಗಳ ಭಾಷಣ. Standup ಕಾಮೆಡಿಯಂತೆ ಬಂದು ಹೋಗುವ ಸಹಪಾಠಿಗಳ ಕಂಠಪಾಠದ ಭಾಷಣ.
 
ಭಾರತ ಮಾತೆಗೆ,ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಕುವ ಜೈಕಾರ ಎಲ್ಲೋ ಕುತೂಹಲದಿಂದ ಅವರುಗಳ ಬಗ್ಗೆ,ಸ್ವಾತಂತ್ರ್ಯ ಎಂದರೇನೆಂದು ತಿಳಿಯಲು ಅಮ್ಮನನ್ನು ಕೇಳಲು ಮರೆಯುತ್ತಿರಲಿಲ್ಲ. ಕೊನೆಗೆ ಶಾಲೆಯಿಂದ ಹೊರಡುವ ಪಥಸಂಚಲನ ಅದಕ್ಕೆ ಹಿಮ್ಮೇಳದ ಸಾಥ್. ಮೂರು ಲೈನು ಮಾಡಿ ಹೊರಟರೆ ರಸ್ತೆ ಕಡೆ ಮನೆಯವರೆಲ್ಲಾ ನಮ್ಮನ್ನ ನೋಡುವಾಗ ಆಗುವ ಹೆಮ್ಮೆ,ಒಮ್ಮೊಮ್ಮೆ ಮುಜುಗರ ಆ ಖುಷಿ ಹೇಳಿ ತೀರದು.
webdunia
ಆಗಲೇ ಸ್ವಚ್ಛ ಭಾರತ ಪರಿಕಲ್ಪನೆಯನ್ನು ನಮ್ಮ ಶಿಕ್ಷಕರುಗಳು ನಮ್ಮಲ್ಲಿ ತುಂಬ್ತಾ ಇದ್ರು ಅನ್ನೊಕೆ ಇಂಬು ಎಂಬಂತೆ ಆ ದಿನ ರಸ್ತೆ ಬದಿ,ಬಸ್ಟ್ಯಾಂಡ್ ಬಳಿ ಸ್ವಚ್ಛಗೊಳಿಸುವುದು. ಊರಿನ ಅಂಗಡಿಯವರು ಖುಷಿಯಿಂದ ನೀಡ್ತಾ ಇದ್ದ ಪಾನಕ, ಆ ಆರೆಂಜ್ ಚಾಕಲೇಟು ಎಷ್ಟೋ ಖುಷಿಯನ್ನು ನೀಡುತ್ತಿತ್ತು. ಅದೇ ಪಥಸಂಚಲನದ ಮೂಲಕ ಕಸದ ರಾಶಿಯನ್ನು ತಂದು ಸುಟ್ಟು ಬೂದಿಗೊಳಿಸಿದರೆ ಅಲ್ಲಿಗೆ ನಮ್ಮ ಅಂದೀನ ಸ್ವಾತಂತ್ರ್ಯ ದಿನ ಅರ್ಥಪೂರ್ಣವಾಗಿ ಅಂತ್ಯಗೊಳ್ಳುತ್ತಿತ್ತು.

ಆದರೆ ಅದೇ ಇಂದು ಸ್ವಾತಂತ್ರ್ಯ ಅಂದರೆ ಸರ್ಕಾರಿ ರಜೆಯಾಗಿ ಮಾತ್ರ ಸೀಮಿತವಾಗಿದೆ.
 
ಅದೇಷ್ಟೋ ಕಾನ್ವೆಂಟ್ ಶಾಲೆಗಳಲ್ಲಿ ಇಂದಿಗೂ ರಾಷ್ಟ್ರಹಬ್ಬದ ಆಚರಣೆಯೇ ಇಲ್ಲ. ಮನೆಯವರೋ ಇರುವ ಒಂದು ಸರ್ಕಾರಿ ರಜೆ ಮೋಜು-ಮಸ್ತಿಗಾಗಿ ಮೀಸಲಿಟ್ಟಾಗ ಅಂದು ಇದೇ ಸ್ವಾತಂತ್ರ್ಯಕ್ಕಾಗಿಯಾ ನಮ್ಮವರು ಹೋರಾಡಿದ್ದು,ರಕ್ತ ಹರಿಸಿದ್ದು ಅನ್ನೋ ಜಿಜ್ಞಾಸೆ ಮೂಡದೆ ಇರದು.
 
ವರ್ಷಕ್ಕೊಮ್ಮೆ ನಮ್ಮ ಹುಟ್ಟಿದ ದಿನ ಬರುತ್ತೆ ಅದಕ್ಕೆ ಸಾವಿರಾರು ರೂಪಾಯಿ ಹಣ ವ್ಯಯಿಸಿ ಆಚರಿಸ್ತೇವೆ ಅದೇ ವರ್ಷಕ್ಕೊಮ್ಮೆ ಬರುವ ಈ ನಮ್ಮ ರಾಷ್ಟ್ರದ  ದಿನವನ್ನು ಆಚರಿಸುವ ಅಸಡ್ಡೆ ನಮಗೇಕೆ? ಇದಕ್ಕಾಗಿ ನಾವು ಮಾಡಬೇಕಗಿರುವುದು ಇಷ್ಟೇ ನಮ್ಮ ಸಮೀಪದ ಸರ್ಕಾರಿ ಶಾಲೆಯ ಆಚರಣೆಯಲ್ಲಿ ಭಾಗವಹಿಸಿ ಆದರೆ ಆ ಪುಟಾಣಿಗಳಿಗೆ ಸಿಹಿ ಜೊತೆ ಸ್ವಲ್ಪ ಪ್ರೀತಿಕೊಟ್ಟು ಬನ್ನಿ. ನಮಗೆ ಹಣ ಕೊಟ್ಟರು ಆ ಖುಷಿ ಸಿಗಲಿಕ್ಕಿಲ್ಲ. ಎಂದಿನಂತೆ ಕಳೆಯುವ ಈ ದಿನವನ್ನು ನಿಮ್ಮ ನೆನಪಿನ ಪುಟಕ್ಕೆ ಸೇರಿಸಿ ಅರ್ಥಪೂರ್ಣವಾಗಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನವೇ ಇಲ್ಲ!