ಪುಣೆ: ‘ಸಚಿನ್ ತೆಂಡುಲ್ಕರ್ ಕ್ರಿಕೆಟ್ ದಿಗ್ಗಜ. ಅವರು ಆಡಿದಷ್ಟು ಸುದೀರ್ಘ ಸಮಯ ಭಾರತೀಯ ಕ್ರಿಕೆಟ್ ನಲ್ಲಿ ನಾನು ಆಡುತ್ತಿರುತ್ತೇನೆ ಎನ್ನಲಾಗದು. ಆದರೆ ಆಡುವಷ್ಟು ದಿನ, ನನ್ನ ಕೊನೆಯ ದಿನದವರೆಗೂ, ಅತ್ಯುತ್ತಮವಾದ ಕೊಡುಗೆ ನೀಡಲು ಬಯಸುತ್ತೇನೆ’ ಹೀಗೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭವಿಷ್ಯದಲ್ಲಿ ಸಚಿನ್ ತೆಂಡುಲ್ಕರ್ ರ ಎಲ್ಲಾ ದಾಖಲೆಗಳನ್ನೂ ಮೀರಬಲ್ಲ ಕ್ರಿಕೆಟಿಗ ಎಂದೇ ಬಿಂಬಿತವಾಗಿರುವ ಕೊಹ್ಲಿ ನಿನ್ನೆಯಷ್ಟೇ ರನ್ ಚೇಸ್ ಮಾಡುವಾಗ ಅತೀ ಹೆಚ್ಚು ಶತಕ ಗಳಿಸಿದ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದ ವಿಶ್ವದಾಖಲೆ ಮಾಡಿದ್ದರು. ಅವರ ಬ್ಯಾಟಿಂಗ್ ಅಬ್ಬರವನ್ನು ನೋಡಿ ಹಲವು ತೆಂಡುಲ್ಕರ್ ಗೆ ಹೋಲಿಸುತ್ತಾರೆ.
ಹೀಗಿರುವಾಗ ಕೊಹ್ಲಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. “ಸಚಿನ್ 21 ವರ್ಷ ದೇಶದ ಕ್ರಿಕೆಟ್ ಭಾರವನ್ನು ಹೆಗಲ ಮೇಲೆ ಹೊತ್ತು ನಡೆದರು. ಇದೀಗ ನಮ್ಮ ಸರದಿ. ಚಕ್ ದೇ ಇಂಡಿಯಾ” ಎಂದು ಕೊಹ್ಲಿ 2011 ರ ವಿಶ್ವಕಪ್ ಗೆದ್ದ ಬಳಿಕ ಟ್ವೀಟ್ ಮಾಡಿದ್ದರು.
ನಿನ್ನೆಯ ಪಂದ್ಯದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕೊಹ್ಲಿ “ಆಗೆಲ್ಲಾ ಸಚಿನ್ ಬಗ್ಗೆ ಸುಲಭವಾಗಿ ಭಾವನಾತ್ಮಕ ಶಬ್ದಗಳಲ್ಲಿ ಹೊಗಳುತ್ತಿದ್ದೆವು. ಆದರೆ ಅದೆಲ್ಲಾ ಸುಲಭವಲ್ಲ ಎಂದು ನನಗೆ ಈಗ ಗೊತ್ತಾಗುತ್ತಿದೆ. ನನಗೆ ಅವರಷ್ಟು ಸಮಯ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಆದರೆ ಕೊನೆಯವರೆಗೂ ನನ್ನ ಕೊಡುಗೆ ನೀಡುತ್ತೇನೆ” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ