ಮುಂಬೈ: ಧೋನಿ ನಾಯಕರಾಗಿದ್ದಾಗ ಯುವರಾಜ್ ಸಿಂಗ್ ರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿದರು ಎಂಬ ಆರೋಪಕ್ಕೂ ಈಗ ಯುವಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೂ ಗಾಸಿಪ್ ಪ್ರಿಯರ ಬಾಯಿಗೆ ಸರಿಯಾದ ಆಹಾರ ಸಿಕ್ಕಂತಾಗಿದೆ.
ಧೋನಿ ನಾಯಕತ್ವ ತ್ಯಜಿಸಿದ್ದಕ್ಕೇ ಯುವಿ ಆಯ್ಕೆಯಾದರು ಎಂದು ಟ್ವಿಟರ್ ನಲ್ಲಿ ತಮಾಷೆ ಹರಿದಾಡುತ್ತಿದೆ. ಆದರೆ ಇದು ಗಂಭೀರ್ ವಿಷಯವೂ ಹೌದು. ಸದಾ ಯುವ ಆಟಗಾರರಿಗೇ ಮಣೆ ಹಾಕುತ್ತಿದ್ದ ಧೋನಿ ಕಾಲದಲ್ಲಿ ಆಶಿಷ್ ನೆಹ್ರಾ, ಯುವಿ ದೇಶೀಯ ಪಂದ್ಯದಲ್ಲಿ ಆಡಿದರೂ ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಆಗುತ್ತಿರಲಿಲ್ಲ. ಇದೀಗ ಹಲವು ವರ್ಷಗಳಿಂದ ತೆರೆ ಮರೆಯಲ್ಲಿದ್ದ ಇವರಿಬ್ಬರನ್ನೂ ಯುವ ಆಟಗಾರರನ್ನು ಕಡೆಗಣಿಸಿ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಮೂಡಿವೆ.
ಈ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಗೆ ಪತ್ರಕರ್ತರಿಂದ ಪ್ರಶ್ನೆ ಎದುರಾಯಿತು ಕೂಡ. ಅದಕ್ಕೆ ಅವರು ಯುವಿ ಪ್ರತಿಭಾವಂತ, ಹಿರಿಯ ಆಟಗಾರ. ಅವರ ಸಾಮರ್ಥ್ಯದ ಬಗ್ಗೆ ನಮಗೆ ಅನುಮಾನವಿಲ್ಲ ಎನ್ನುವಂತಹ ಸಿದ್ಧ ಉತ್ತರ ಕೊಟ್ಟರು.
ಆದರೆ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗ್ಯೂ ಇಶಾಂತ್ ಶರ್ಮಾರನ್ನು ಕಡೆಗಣಿಸಿ ಹಿರಿಯ ಆಶಿಷ್ ನೆಹ್ರಾರನ್ನು ಆಯ್ಕೆ ಮಾಡಿದ್ದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅವರಿಗಿಂತ ಚೆನ್ನಾಗಿ ಫಾರ್ಮ್ ನಲ್ಲಿರುವ ವೇಗಿಗಳು ಈಗ ಲಭ್ಯರಿಲ್ಲವೇ? ಹೀಗಾಗಿಯೇ ಟ್ವಿಟರ್ ನಲ್ಲಿ ಹರಿದಾಡುತ್ತಿರುವ ತಮಾಷೆಗಳಿಗೂ ಈ ಇಬ್ಬರು ಹಿರಿಯರ ಆಯ್ಕೆಗೂ ಸಾಮ್ಯತೆಯಿದೆ. ಬಹುಶಃ ವೀರೇಂದ್ರ ಸೆಹ್ವಾಗ್ ನಿವೃತ್ತರಾಗದಿದ್ದರೆ ಅವರಿಗೂ ಒಂದು ಅವಕಾಶ ಸಿಗುತ್ತಿತ್ತು ಎನ್ನುವ ಜೋಕ್ ಸುಮ್ಮನೇ ಹರಿದಾಡುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ