ಲಂಡನ್: ವಿಶ್ವಕಪ್ ಕ್ರಿಕೆಟ್ 2019 ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗುತ್ತಿದೆ. ರೋಹಿತ್ ಒಂದಾದ ಮೇಲೊಂದರಂತೆ ನೀರು ಕುಡಿದಷ್ಟೇ ಸಲೀಸಾಗಿ ಶತಕ ಗಳಿಸುತ್ತಿದ್ದಾರೆ.
ಅಷ್ಟಕ್ಕೂ ರೋಹಿತ್ ಈ ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ? ಇದನ್ನು ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ಈ ರೀತಿ ತಾನು ಯಶಸ್ಸಿನ ಹಾದಿ ಹಿಡಿಯುವುದಕ್ಕೆ ಯುವರಾಜ್ ಸಿಂಗ್ ಸಲಹೆಯೇ ಕಾರಣ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದ ಯುವರಾಜ್ ಐಪಿಎಲ್ ನಲ್ಲಿ ರೋಹಿತ್ ಜತೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಈ ವೇಳೆ ಯುವಿ ಬಳಿ ರೋಹಿತ್ ತಮಗೆ ನಿರೀಕ್ಷಿಸಿದಷ್ಟು ರನ್ ಪೇರಿಸಲು ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಚರ್ಚಿಸಿದ್ದರಂತೆ.
ಅದಕ್ಕೆ ಯುವರಾಜ್ ತಲೆಕೆಡಿಸಿಕೊಳ್ಳಬೇಡ. ನಾನೂ 2011 ರ ವಿಶ್ವಕಪ್ ಗೆ ಮೊದಲು ಹೀಗೇ ಯೋಚಿಸುತ್ತಿದ್ದೆ. ಆದರೆ ಸಕಾರಾತ್ಮಕವಾಗಿ ಯೋಚನೆ ಮಾಡಲು ಶುರು ಮಾಡಿದೆ. ಹಾಗೇ ವಿಶ್ವಕಪ್ ನಲ್ಲಿ ಕ್ಲಿಕ್ ಆದೆ. ನೀನೂ ಹೀಗೆಯೇ. ಬಹುಶಃ ದೊಡ್ಡ ವೇದಿಕೆಯಲ್ಲಿ ನೀನು ನೀನಾಗಿಯೇ ಉತ್ತಮ ಪರ್ಫಾರ್ಮೆನ್ಸ್ ಕೊಡಲು ಶುರು ಮಾಡುವೆ. ತಲೆಕೆಡಿಸಿಕೊಳ್ಳಬೇಡ ಎಂದಿದ್ದರು. ಬಹುಶಃ ಯುವಿ ಅಂದು ನನಗೆ ಹೇಳಿದ ಆ ದೊಡ್ಡ ವೇದಿಕೆ ಇದುವೇ ಆಗಿರಬೇಕು ಎಂದು ರೋಹಿತ್ ನೆನೆಸಿಕೊಂಡಿದ್ದಾರೆ.