ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಹೇಗಾಗಿದೆಯೆಂದರೆ, ಒಬ್ಬ ಹೊರ ಹೋದರೆ ಇನ್ನೊಬ್ಬ ಪ್ರತಿಭಾವಂತ ತಂಡಕ್ಕೆ ಕಾಲಿಡುತ್ತಾರೆ. ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತಲೆ ನೋವು ತಂದಿಡುತ್ತಾರೆ. ಈಗ ಟೆಸ್ಟ್ ತಂಡದ ವಿಕೆಟ್ ಕೀಪರ್ ವಿಷಯದಲ್ಲೂ ಇದೇ ಆಗಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಗಾಯಗೊಂಡು ವೃದ್ಧಿಮಾನ್ ಸಹಾ ಹೊರ ಹೋಗುತ್ತಿದ್ದಂತೆ ಅವರ ಜಾಗಕ್ಕೆ ವಿಕೆಟ್ ಕೀಪರ್ ಆಗಿ ಹಲವು ವರ್ಷಗಳ ನಂತರ ಪಾರ್ಥಿವ್ ಪಟೇಲ್ ತಂಡಕ್ಕೆ ಮರಳಿದರು. ಸಿಕ್ಕಿದ್ದೇ ಚಾನ್ಸ್ ಅಂತ ಪಾರ್ಥಿವ್ ಬ್ಯಾಟಿಂಗ್ ನಲ್ಲೂ ಮಿಂಚಿದರು.
ಇದೇ ಈಗ ಆಯ್ಕೆಗಾರರ ತಲೆನೋವಿಗೆ ಕಾರಣವಾಗಿರುವುದು. ಮುಂದಿನ ಸರಣಿಗೆ ಸಹಾ ಚೇತರಿಸಿಕೊಳ್ಳುತ್ತಾರೆ. ಅವರನ್ನು ಆಯ್ಕೆ ಮಾಡಿದರೆ, ಉತ್ತಮವಾಗಿ ಆಡಿದ ಹಿರಿಯ ಪಾರ್ಥಿವ್ ಗೆ ಅನ್ಯಾಯವಾದಂತೆ. ಅತ್ತ ದರಿ ಇತ್ತ ಪುಲಿ ಸ್ಥಿತಿ.
ಆದರೆ ಪಾರ್ಥಿವ್ ಪ್ರದರ್ಶನದಿಂದ ತನಗೆ ಚಿಂತೆಯಾಗಿಲ್ಲ ಎಂದು ಸಹಾ ಹೇಳಿಕೊಂಡಿದ್ದಾರೆ. “ಪಾರ್ಥಿವ್ ಜತೆ ಸ್ಪರ್ಧೆ ಏನಿಲ್ಲ. ನನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದೇ ನನ್ನ ಗುರಿ” ಎಂದಿದ್ದಾರೆ.
ಒಂದು ಕಡೆ ನನ್ನ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಹಾ ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಸರಣಿ ಬಹುಶಃ ನನ್ನ ಸದ್ಯದ ಕೊನೆಯ ಸರಣಿಯಾಗಿರಬಹುದು ಎಂದು ಚಿಂತೆ ಮಾಡಲ್ಲ ಎಂದು ಪಾರ್ಥಿವ್ ಹೇಳಿಕೊಳ್ಳುತ್ತಾರೆ. ನಿಜವಾಗಿ ಚಿಂತೆ ಇವರಿಗಲ್ಲ. ಇವರಲ್ಲಿ ಯಾರು ಉತ್ತಮರು ಎಂದು ಆಯ್ಕೆ ಮಾಡುವ ಆಯ್ಕೆಗಾರರಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ