ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಬಹುತೇಕ ಪಂದ್ಯಗಳು ಮಳೆಯಿಂದಾಗಿ ರದ್ದಾಗುತ್ತಿರುವುದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಉಪಾಯವೊಂದನ್ನು ಹೇಳಿದ್ದಾರೆ.
ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಗಂಗೂಲಿ ತಮ್ಮ ತವರಿನಲ್ಲಿ ಪಂದ್ಯ ರದ್ದಾಗದಂತೆ ತಡೆಯಲು ಮಾಡಿದ ಉಪಾಯವನ್ನು ಹೇಳಿದ್ದಾರೆ. ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ತಾವು ಬಳಸುತ್ತಿರುವ ಕವರ್ ಇಲ್ಲೂ ಬಳಸಬಹುದು ಎಂದು ಗಂಗೂಲಿ ಉಪಾಯ ಸೂಚಿಸಿದ್ದಾರೆ.
‘ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಾವು ಇಂಗ್ಲೆಂಡ್ ನಿಂದಲೇ ಆಮದು ಮಾಡಿಕೊಳ್ಳುವ ಬಿಳಿ ಕವರ್ ಬಳಸುತ್ತೇವೆ. ಅದನ್ನು ಇಡೀ ಗ್ರೌಂಡ್ ಗೆ ಹೊದಿಸಿದರೆ ಮಳೆ ನಿಂತ 10 ನಿಮಿಷದಲ್ಲಿ ಮತ್ತೆ ಪಂದ್ಯ ಶುರು ಮಾಡಲು ಸಾಧ್ಯವಾಗುತ್ತದೆ. ಈ ಕವರ್ ಲೈಟ್ ವೈಟ್ ಆಗಿದ್ದು, ತೆಗೆಯಲೂ ಹೆಚ್ಚು ಜನರು ಬೇಕಾಗಿಲ್ಲ. ಇದನ್ನೇ ಇಲ್ಲಿನ ಮೈದಾನದಲ್ಲಿ ಬಳಸಿ ಪಂದ್ಯ ರದ್ದಾಗದಂತೆ ನೋಡಿಕೊಳ್ಳಬಹುದು’ ಎಂದು ಗಂಗೂಲಿ ವಿವರಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲೂ ಮಳೆ ನಿಂತರೂ ಔಟ್ ಫೀಲ್ಡ್ ಕವರ್ ಆಗದೇ ಒದ್ದೆಯಾಗಿದ್ದರಿಂದ ಪಂದ್ಯ ರದ್ದುಗೊಳಿಸಬೇಕಾಯಿತು. ಹೀಗಾಗಿ ಗಂಗೂಲಿ ಹೇಳಿರುವ ಈ ಉಪಾಯ ಸರಿಯಾಗಿಯೇ ಇದೆ.