ಲಂಡನ್: ಇಂಗ್ಲೆಂಡ್ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದಾಗಿ ಬಹುತೇಕ ಪಂದ್ಯಗಳ ಫಲಿತಾಂಶ ಬಾರದೇ ಇರುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಮಳೆ ಬರುವಾಗ ಮೈದಾನದ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಕ್ರಿಕೆಟ್ ಪಂದ್ಯದ ನಡುವೆ ಮಳೆ ಬರುವುದು, ಮಳೆ ನಿಂತ ಮೇಲೆ ಪಂದ್ಯ ನಡೆಸುವುದು ಏನೂ ಹೊಸತಲ್ಲ. ಆದರೆ ಇಂಗ್ಲೆಂಡ್ ನಲ್ಲಿ ಮಳೆ ನಿಂತರೂ ಆಡಲು ಸಾಧ್ಯವಾಗುತ್ತಿಲ್ಲ. ಕಾರಣ ಮೈದಾನದ ಔಟ್ ಫೀಲ್ಡ್ ಗೆ ಸರಿಯಾಗಿ ಕವರ್ ಮಾಡದೇ ಇರುವುದು.
ಮೈದಾನದಲ್ಲಿ ಪಿಚ್ ಮತ್ತು ಸುತ್ತಮುತ್ತಲ ಪ್ರದೇಶವನ್ನು ಮಾತ್ರ ಕವರ್ ಮಾಡಲಾಗುತ್ತಿದೆ. ಇದರಿಂದಾಗಿ ಔಟ್ ಫೀಲ್ಡ್ ಒದ್ದೆಯಾಗುತ್ತಿದೆ. ಹೀಗಾಗಿ ಮಳೆ ನಿಂತರೂ ಮೈದಾನ ಒದ್ದೆಯಾಗಿರುವುದರಿಂದ ಪಂದ್ಯ ನಡೆಸಲಾಗುತ್ತಿಲ್ಲ.
ಉತ್ತಮ ಡ್ರೈನೇಜ್ ವ್ಯವಸ್ಥೆ ಎಲ್ಲಾ ಇದ್ದರೂ ಮೈದಾನವನ್ನು ಸರಿಯಾಗಿ ಕವರ್ ಮಾಡದೇ ಇಂತಹ ದೊಡ್ಡ ಟೂರ್ನಿ ನಡೆಸಲು ಮುಂದಾಗಿರುವುದಕ್ಕೆ ಜನ ಈಗ ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಂತೂ ವಿಶ್ವಕಪ್ ಕೂಟ ಅವ್ಯವಸ್ಥೆಯ ಆಗರವಾಗಿರುವುದು ಸುಳ್ಳಲ್ಲ.