ಲಂಡನ್: ಸಾಮಾನ್ಯವಾಗಿ ತಂಡದಿಂದ ಕೈ ಬಿಟ್ಟರೆ, ಅದೂ ಮಹತ್ವದ ಟೂರ್ನಿಯಲ್ಲಿ ಹೊರಗುಳಿಯುವಂತಾದರೆ ಪ್ರಮುಖ ಆಟಗಾರರೆನಿಸಿಕೊಂಡವರು ಮುನಿಸಿಕೊಳ್ಳುತ್ತಾರೆ. ಆದರೆ ಆರ್. ಅಶ್ವಿನ್ ಹಾಗಲ್ವಂತೆ!
ಹಾಗಂತ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಬಗ್ಗೆ ಕೊಹ್ಲಿಯನ್ನು ಪ್ರಶ್ನಿಸಿದಾಗ ಅವರು ಈ ರೀತಿ ಹೇಳಿದ್ದಾರೆ.
ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಅಶ್ವಿನ್ ತಮ್ಮ ಮೇಲೆ ಬೇಸರಿಸಿಕೊಳ್ಳುವುದಿಲ್ಲ. ಬದಲಾಗಿ ಬೆಂಬಲಿಸುತ್ತಾರೆ ಎಂದು ಕೊಹ್ಲಿ ಪ್ರಶಂಸಿಸಿದ್ದಾರೆ. ಅವರು ಟಾಪ್ ಪ್ಲೇಯರ್. ಅವರಿಗೆ ತಂಡದ ಸಮತೋಲನವನ್ನು ಅರ್ಥ ಮಾಡಿಕೊಳ್ಳುವ ಒಳ್ಳೆಯತನವಿದೆ. ಏನೇ ನಿರ್ಧಾರ ತೆಗೆದುಕೊಂಡರೂ ನಿನ್ನ ಜತೆಗೆ ನಾನಿದ್ದೇನೆ ಎಂದು ಬೆನ್ನುತಟ್ಟುತ್ತಾರೆ ಎಂದಿದ್ದಾರೆ ಕೊಹ್ಲಿ.
ಬೌಲಿಂಗ್ ಮಾಡುವಾಗ ಫೀಲ್ಡಿಂಗ್ ಸಂಯೋಜನೆ ವಿಷಯದಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ತಂಡದ ಆಯ್ಕೆಯ ವಿಷಯಕ್ಕೆ ಬಂದಾಗ ನನ್ನ ನಿರ್ಧಾರವನ್ನು ಅವರು ಬೆಂಬಲಿಸುತ್ತಾರೆ ಎಂದು ಕೊಹ್ಲಿ ಅಶ್ವಿನ್ ರನ್ನು ಹೊಗಳಿದ್ದಾರೆ.