ಇಂಗ್ಲೆಂಡ್ ತಂಡದ ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ತಮ್ಮ ತಂಡದ ಆಟಗಾರರು ಕಳಪೆ ಪ್ರದರ್ಶನವನ್ನು ಮುಂದುವರೆಸಿರುವುದು ಪಾಕಿಸ್ತಾನ್ ಕ್ರಿಕೆಟ್ ತಂಡ ಕೋಚ್ ಮಿಕ್ಕಿ ಅರ್ಥರ್ ಅವರನ್ನು ಕೆರಳಿಸಿದೆ. ಇದೇ ರೀತಿ ಕಳಪೆ ಆಟವನ್ನು ಮುಂದುವರೆಸಿದರೆ ಅಂತವರನ್ನು ತಂಡದಿಂದ ಕೈ ಬಿಡಲಾಗುವುದು ಎಂದು ಅವರು ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ದಿನಗಳ ಕ್ರಿಕೆಟ್ ಸರಣಿಯಲ್ಲಿ ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿರುವ ಅವರು ನೀವು ಇದೇ ರೀತಿ ಆಟವನ್ನು ಮುಂದುವರೆಸಿದರೆ 2019ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹ ಸಾಧ್ಯವಿಲ್ಲ ಎಂದು ತಮ್ಮ ಆತಂಕವನ್ನು ಹೊರಹಾಕಿದ್ದಾರೆ.
ಸತತ ಸೋಲಿನಿಂದಾಗಿ ತಂಡದ ವಿರುದ್ಧ ವ್ಯಾಪಕ ಟೀಕೆಗಳು ಕಂಡು ಬರುತ್ತಿದೆ. ಇನ್ನೊಂದು ಪಂದ್ಯ ಬಾಕಿ ಇದ್ದು ಪಾಕ್‌ಗೆ ಕ್ಲೀನ್ ಸ್ವೀಪ್ ಭಯ ಕಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೋಚ್ ತಂಡದ ಪ್ರದರ್ಶವನ್ನು ಉತ್ತಮ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ಬದಲಾವಣೆ ಅನಿವಾರ್ಯ ಎಂದು ಹೇಳಿದ್ದಾರೆ.
ಏಕದಿನ ಶ್ರೇಯಾಂಕದಲ್ಲಿ ಸದ್ಯ 7 ನೇ ಸ್ಥಾನದಲ್ಲಿರುವ ಪಾಕ್ ಇಂಗ್ಲೆಂಡ್ ವಿರುದ್ಧ ಸೋತರೆ ಸ್ಥಾನದಲ್ಲಿ ಮತ್ತಷ್ಟು ಕೆಳಕ್ಕೆ ಜಾರಲಿದೆ. ಮುಂದಿನ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ 10ರೊಳಗೆ ಸ್ಥಾನವಿರದಿದ್ದರೆ 2019ರ ವಿಶ್ವಕಪ್‌ಗಾಗಿ ಪಾಕ್ ಅರ್ಹತಾ ಸುತ್ತು ಆಡುವ ಪ್ರಮೇಯ ಬಂದೊದಗುತ್ತದೆ. 10ನೇ ಶ್ರೇಯಾಂಕದೊಳಗಿದ್ದರೆ ಮಾತ್ರ ವಿಶ್ವಕಪ್‌ನಲ್ಲಿ ನೇರ ಪ್ರವೇಶವಿರುತ್ತದೆ.