ಇಸ್ಲಾಮಾಬಾದ್: ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟಿಗರ ಮೇಲೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಯಾವೆಲ್ಲಾ ದಾರಿ ಕಂಡುಕೊಳ್ಳುತ್ತಾರೆಂಬುದಕ್ಕೆ ಇದೊಂದು ಉದಾಹರಣೆ. ಪರಿಣಾಮ ಪಾಕ್ ಕ್ರಿಕೆಟಿಗ ವಹಾಬ್ ರಿಯಾಜ್ ಆನ್ ಲೈನ್ ಮಾರಾಟ ವೆಬ್ ಸೈಟ್ ನಲ್ಲಿ ಮಾರಾಟದ ವಸ್ತುವಾಗಿದ್ದಾರೆ!
ಭಾರತದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ಹೊರಕ್ಕೆ ಬಿದ್ದ ವಹಾಬ್ ಪಾಕ್ ತಂಡದ ಪ್ರಮುಖ ವೇಗಿಯಾಗಿದ್ದರು. ಅವರ ಫಿಟ್ನೆಸ್ ಬಗ್ಗೆ ಮೂದಲಿಸಿರುವ ಅಭಿಮಾನಿಯೊಬ್ಬ 160 ಅಮೆರಿಕನ್ ಡಾಲರ್ ಗೆ ಅವರನ್ನು ಮಾರಾಟಕ್ಕಿಟ್ಟಿದ್ದ.
ಇದಕ್ಕೆ ಹಲವಾರು ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಕೂಡಾ! ‘ಈ ಮಾಡೆಲ್ ಹಳೆಯದಾಯಿತು. ಸಾಕಷ್ಟು ಬಳಕೆ ಮಾಡಿರುವುದರಿಂದ ಸ್ವಲ್ಪ ಹರಿದಿದೆ, ನಾನೀಗ ಜುನೈದ್ ಖಾನ್ ಮಾಡೆಲ್ ಗೆ ಬದಲಾಯಿಸಲು ಬಯಸಿದ್ದೇನೆ. ಅದಕ್ಕಾಗಿ ಈ ಸರಕನ್ನು ಮಾರಲು ಉದ್ದೇಸಿದ್ದೇನೆ’ ಎಂದು ಪ್ರಮುಖ ಆನ್ ಲೈನ್ ಮಾರಾಟ ಸಂಸ್ಥೆಯಾದ ಇ-ಬೇ ಯಲ್ಲಿ ವ್ಯಕ್ತಿಯೊಬ್ಬ ಜಾಹೀರಾತು ನೀಡಿದ್ದ.
ಪ್ರಮಾದದ ಅರಿವಾಗುತ್ತಿದ್ದಂತೆ ಇ-ಬೇ ಸಂಸ್ಥೆ ಈ ಜಾಹೀರಾತನ್ನು ಕಿತ್ತು ಹಾಕಿದೆ. ಆದರೆ ಅಷ್ಟರಲ್ಲಾಗಲೇ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.