ಜೊಹಾನ್ಸ್ ಬರ್ಗ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ಟೀಂ ಇಂಡಿಯಾದೊಳಗಿನ ಒಗ್ಗಟ್ಟಿನ ಬಗ್ಗೆ ಸಂಶಯ ಮೂಡಿದೆ. ಸರಣಿಗೆ ತಯಾರಿ ನಡೆಸಿರುವ ಕುರಿತಂತೆ ಕೋಚ್ ಮತ್ತು ನಾಯಕನ ಹೇಳಿಕೆಗಳು ಭಿನ್ನವಾಗಿರುವುದು ಇದಕ್ಕೆ ಕಾರಣ.
ಮೊನ್ನೆಯಷ್ಟೇ ಕೋಚ್ ರವಿಶಾಸ್ತ್ರಿ ನಾವು ಸರಣಿಗೆ ಸರಿಯಾಗಿ ತಯಾರಾಗಿ ಬಂದಿರಲಿಲ್ಲ. ನಮಗೆ ಕೆಲವು ಅಭ್ಯಾಸ ಪಂದ್ಯಗಳು ಬೇಕಿತ್ತು. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಅಭ್ಯಾಸ ಬೇಕಿತ್ತು ಎಂದಿದ್ದರು.
ಆದರೆ ಇಂದಿನ ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ನಾಯಕ ವಿರಾಟ್ ಕೊಹ್ಲಿ, ತಮ್ಮ ತಂಡ ಪೂರ್ವ ಸಿದ್ಧತೆಯಿಲ್ಲದೇ ದ.ಆಫ್ರಿಕಾಗೆ ಬಂದಿಳಿದಿರಲಿಲ್ಲ ಎಂದಿದ್ದಾರೆ. ಇದರಿಂದಾಗಿ ಕೋಚ್ ಮತ್ತು ನಾಯಕನ ನಡುವೆ ಎಲ್ಲೋ ಭಿನ್ನರಾಗ ಮೂಡಿದಂತೆ ತೋರುತ್ತಿದೆ.
‘ನಾವು ಸರಿಯಾಗಿ ತಯಾರಾಗಿ ಬಂದಿರಲಿಲ್ಲ ಎಂದು ನನಗನಿಸುತ್ತಿಲ್ಲ. ನಮಗೆ ಒಂದು ವಾರಗಳ ಸಮಯ ಸಿಕ್ಕಿತ್ತು. ಅದರಲ್ಲಿ ಒಂದು ದಿನ ಮಾತ್ರ ಪ್ರಯಾಣದಲ್ಲಿ ಕಳೆದು ಹೋಯಿತು. ಒಂದು ಸರಣಿ ಸೋತಿದ್ದಕ್ಕೆ ನಾನು ಹೀಗೆ ಹೇಳುತ್ತಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.
‘ತಯಾರಿ ಎನ್ನುವುದು ಒಬ್ಬರ ಜವಾಬ್ದಾರಿ ಅಲ್ಲ. ಎಲ್ಲರೂ ಸೇರಿ ಮಾಡುವಂತಹದ್ದು. ಸೋಲಿಗೆ ಬಾಹ್ಯ ಕಾರಣಗಳನ್ನು ಹುಡುಕುತ್ತಾ ಕೂರುವುದಿಲ್ಲ. ಇದು ನಮ್ಮ ತಪ್ಪಿನಿಂದ, ಬೇಜವಾಬ್ದಾರಿಯಿಂದ ಆದ ಸೋಲು’ ಎಂದು ಕೊಹ್ಲಿ, ಕೋಚ್ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ