ಲಂಡನ್: ಅಫ್ಘಾನಿಸ್ತಾನದ ವಿರುದ್ಧ ಧೋನಿ ಮತ್ತು ಕೇದಾರ್ ಜಾಧವ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅಸಮಾಧಾನ ವ್ಯಕ್ತಪಡಿಸಿದಾಗ ಎಲ್ಲರೂ ಸಚಿನ್ ರನ್ನೇ ದೂಷಿಸಿದ್ದರು.
ಆದರೆ ಇದೀಗ ನಿನ್ನೆ ನಡೆದ ಇಂಗ್ಲೆಂಡ್ ಪಂದ್ಯದಲ್ಲಿಯೂ ಈ ಇಬ್ಬರ ಆಟ ನೋಡಿ ಈಗ ಮಾಜಿ ನಾಯಕ ಸೌರವ್ ಗಂಗೂಲಿ, ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಕೂಡಾ ಅಸಮಾಧಾನಗೊಂಡಿದ್ದಾರೆ.
ಧೋನಿ ಮತ್ತು ಕೇದಾರ್ ಜಾಧವ್ ಬ್ಯಾಟಿಂಗ್ ನಲ್ಲಿ ಸಕಾರಾತ್ಮಕ ಮನೋಭಾವ ತೋರಲಿಲ್ಲ ಎಂದು ಸಚಿನ್ ಆಪಾದಿಸಿದ್ದರು. ಆದರೆ ಆಗ ಧೋನಿ ಅಭಿಮಾನಿಗಳು ಟ್ವಿಟರ್ ನಲ್ಲಿ ಸಚಿನ್ ವಿರುದ್ಧ ಸಿಡಿದೆದ್ದಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿಯೂ ಇಬ್ಬರು ಆಟಗಾರರ ನಿಧಾನಗತಿಯ ಆಟ ನೋಡಿ ಗಂಗೂಲಿ ಕೂಡಾ ಇದಕ್ಕೆ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾಮೆಂಟರಿ ಮಾಡುತ್ತಿದ್ದ ನಾಸಿರ್ ಹುಸೇನ್ ಕೂಡಾ ಧೋನಿ ಬ್ಯಾಟಿಂಗ್ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ.
ಹೀಗಾಗಿ ಈಗ ಧೋನಿ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಬೇಕಾದ ಅಗತ್ಯ ಬಂದಿದೆ. ಈ ಬಾರಿ ನಾಯಕ ಕೊಹ್ಲಿ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಗೆಲ್ಲಬೇಕಾದರೆ ಧೋನಿ ಸೇರಿದಂತೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕ್ಷಿಪ್ರವಾಗಿ ರನ್ ಗಳಿಸುವುದನ್ನು ಕಲಿಯಲೇಬೇಕಾಗಿದೆ.