ಲಂಡನ್: ವಿಶ್ವಕಪ್ ಕೂಟದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ನಿನ್ನೆಯ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಕತ್ತರಿ ಹಾಕಿದ್ದು ಕೂಟದ ಮೊದಲ ಸೋಲುಣಿಸಿದೆ. ಇದರೊಂದಿಗೆ ಇಂಗ್ಲೆಂಡ್ ಸೆಮಿಫೈನಲ್ ಆಸೆ ಜೀವಂತವಾಗಿರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತೀಯ ಬೌಲರ್ ಗಳನ್ನು ಹಿಗ್ಗಾ ಮುಗ್ಗಾ ಚೆಂಡಾಡಿ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಕಲೆ ಹಾಕಿತು. ಈಗಿನ ಟ20 ಜಮಾನದಲ್ಲಿ ಈ ಮೊತ್ತವನ್ನು ಬೆನ್ನುತ್ತುವುದು ಅಸಾಧ್ಯವೇನೂ ಆಗಿರಲಿಲ್ಲ.
ಆದರೆ ಕೆಎಲ್ ರಾಹುಲ್ (0) ರನ್ನು ಆರಂಭದಲ್ಲಿಯೇ ಕಳೆದುಕೊಂಡು ಭಾರತ ಸಂಕಷ್ಟಕ್ಕೀಡಾಯಿತು. ಆದರೆ ಭಾರತದ ಪರ ಬೆಸ್ಟ್ ಚೇಸರ್ ಗಳೆನಿಸಿದ ಉಪನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚೇತರಿಕೆ ನೀಡಿದರು. ಆದರೆ ಇವರು ಎಂದಿನ ಬ್ಯಾಟಿಂಗ್ ಅಬ್ಬರ ತೋರದೇ ವಿಕೆಟ್ ಉಳಿಸಿಕೊಳ್ಳುವುದರತ್ತ ಹೆಚ್ಚು ಗಮನ ಹರಿಸಿದರು. ಈ ನಡುವೆ ರೋಹಿತ್ ಈ ವಿಶ್ವಕಪ್ ಕೂಟದ ಮೂರನೇ ಶತಕ ಗಳಿಸಿದರು. ಅವರು 109 ಎಸೆತಗಳಲ್ಲಿ 102 ಬಾರಿಸಿ ಔಟಾದರು. ನಾಯಕ ಕೊಹ್ಲಿ 76 ಎಸೆತಗಳಲ್ಲಿ 66 ರನ್ ಗಳಿಸಿದರು.
ಆದರೆ ಭಾರತ ವಿಕೆಟ್ ಹೆಚ್ಚು ಕಳೆದುಕೊಳ‍್ಳದೇ ಇದ್ದಿದ್ದರಿಂದ ಅಂತಿಮ ಓವರ್ ಗಳಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದ್ದರೆ ಗೆಲುವಿನ ಸಾಧ್ಯತೆಯಿತ್ತು. ಆದರೆ ಅಂತಿಮ ಓವರ್ ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಮತ್ತು ಕೇದಾರ್ ಜಾಧವ್ ಜೋಡಿ ಸಿಂಗಲ್ಸ್ ತೆಗೆದುಕೊಳ್ಳುವುದರತ್ತ ಹೆಚ್ಚು ಗಮನಹರಿಸಿದ್ದರಿಂದ ನಿರೀಕ್ಷಿಸಿದ ರನ್ ಗತಿ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಈ ನಡುವೆ ಧೋನಿ 31 ಎಸೆತಗಳಲ್ಲಿ 42 ರನ್ ಮತ್ತು ಜಾಧವ್ 13 ಎಸೆತಗಳಲ್ಲಿ 12 ರನ್ ಗಳಿಸಿದರು. ಇದರಿಂದಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 31 ರನ್ ಗಳ ಸೋಲನುಭವಿಸಿತು.
ಇದು ಅಭಿಮಾನಿಗಳ ಸಿಟ್ಟು ನೆತ್ತಿಗೇರಿಸಿದೆ. ಭಾರತದ ಸೋಲಿಗೆ ಧೋನಿ ಮತ್ತು ಕೇದಾರ್ ಜಾಧವ್ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರೂ ಗೆಲುವಿನ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಅಭಿಮಾನಿಗಳು ಸಿಟ್ಟು ಹೊರಹಾಕಿದ್ದಾರೆ. ಇನ್ನು ಕೆಲವರು ಕೊಹ್ಲಿ ಯಾಕೆ ಇನ್ನೂ ಧೋನಿಯನ್ನು ತಲೆಮೇಲೆ ಹೊತ್ತು ತಿರುಗುತ್ತಿದ್ದಾರೋ ಎಂದು ಆಕ್ರೋಶ ಹೊರಹಾಕಿದ್ದಾರೆ.