ಪುಣೆ: ಟೀಂ ಇಂಡಿಯಾಗೆ ಈಗ ನಾಯಕ ಯಾರು? ನಿನ್ನೆ ನಡೆದ ಏಕದಿನ ಪಂದ್ಯ ನೋಡುತ್ತಿದ್ದವರಿಗೆ ಇಂತಹದ್ದೊಂದು ಅನುಮಾನ ಮೂಡಿದೆ. ಯಾಕೆಂದರೆ ನಾಯಕತ್ವಕ್ಕೆ ರಾಜೀನಾಮೆ ನೀಡಿದರೂ ಧೋನಿಯೇ ಬಾಸ್ ಎಂದು ಫೀಲ್ಡಿಂಗ್ ಮಾಡುತ್ತಿದ್ದ ಟೀಂ ಇಂಡಿಯಾವನ್ನು ನೋಡಿದರೆ ಗೊತ್ತಾಗುತ್ತದೆ.
ಇಂಗ್ಲೆಂಡ್ ಯದ್ವಾ ತದ್ವಾ ರನ್ ಚಚ್ಚುತ್ತಿದ್ದರೆ, ರಿಯಲ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೊಂಚ ವಿಚಲಿತರಾಗಿದ್ದರು. ಆಗಾಗ ಧೋನಿ ಬಳಿ ಬಂದು ಚಿಟ್ ಚಾಟ್ ನಡೆಸುತ್ತಿದ್ದರು. ಅವರ ಸಲಹೆ ಪಡೆದು ಫೀಲ್ಡಿಂಗ್ ಜಮಾಯಿಸುತ್ತಿದ್ದರು.
ಇನ್ನು ಕೆಲವೊಮ್ಮೆ ಧೋನಿಯೇ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಅಲ್ಲದೆ, ನಿಂತಲ್ಲಿಂದಲೇ ಕೊಹ್ಲಿಗೆ ಹೀಗೆ ಫೀಲ್ಡ್ ಸೆಟ್ ಮಾಡಿಸು ಎಂದು ಸೂಚಿಸುತ್ತಿದ್ದುದೂ ಕಂಡು ಬಂತು. ಅಲ್ಲದೆ, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ರ ಬ್ಯಾಟ್ ಗೆ ಸವರಿಕೊಂಡು ಬಂದ ಬಾಲ್ ಕ್ಯಾಚ್ ಮಾಡಿದ ಧೋನಿ ಅಪೀಲ್ ಮಾಡಿದರೂ ಅಂಪಾಯರ್ ಪುರಸ್ಕರಿಸಲಿಲ್ಲ. ಕೂಡಲೇ ಕೊಹ್ಲಿಗೆ ರಿವ್ಯೂ ಪಡೆಯುವಂತೆ ಆದೇಶಿಸಿದ್ದಲ್ಲದೆ, ಯಶಸ್ಸೂ ಗಳಿಸಿದರು.
ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಕೊಹ್ಲಿ ನಿರಾಕರಿಸುತ್ತಿದ್ದರೂ ತಾವೇ ರಿವ್ಯೂಗೆ ಕರೆ ನೀಡಿ ಯಶಸ್ಸು ಗಳಿಸಿದರು. ಇದೂ ಸಾಲದ್ದಕ್ಕೆ ಆಗಾಗ ಧೋನಿ ಕೊಹ್ಲಿಯನ್ನು ಕರೆಸಿ ಸಲಹೆ ಸೂಚನೆ ನೀಡುತ್ತಿದ್ದುದು ಕಂಡುಬಂತು. ಅಂತೂ ಕೊಹ್ಲಿ ನಾನು 95 ಶೇಕಡಾ ಧೋನಿ ಸಲಹೆ ಪಡೆದೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದನ್ನು ಮಾಡಿ ತೋರಿಸಿದರು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ