ನವದೆಹಲಿ: ಧೋನಿ ತಂಡಕ್ಕಾಗಿ ಆಡುವ ವಿಷಯ ಬಂದರೆ ತಮ್ಮ ವೈಯಕ್ತಿಕ ಜೀವನವನ್ನೂ ಲೆಕ್ಕಿಸುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಅಂತಹದ್ದೇ ಒಂದು ಘಟನೆಯನ್ನು ಟೀಂ ಇಂಡಿಯಾ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ಸ್ಮರಿಸಿಕೊಂಡಿದ್ದಾರೆ.
ಅದು ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಪಂದ್ಯವಾಗಿತ್ತು. ಭಾರತದ ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವಾಗಿತ್ತು. ಆದರೆ ಜಿಮ್ ಮಾಡುತ್ತಿದ್ದಾಗ ಧೋನಿ ಬೆನ್ನಿಗೆ ಗಾಯ ಮಾಡಿಕೊಂಡರು.
ಅವರಿಗೆ ಆಗ ಎಷ್ಟು ನೋವಿತ್ತೆಂದರೆ ನಡೆಯಲೂ ಆಗುತ್ತಿರಲಿಲ್ಲ. ಬೆಲ್ ಒತ್ತಿ ವೈದ್ಯಕೀಯ ಸಿಬ್ಬಂದಿಯನ್ನು ಕರೆದರು. ಕೊನೆಗೆ ಅವರು ಸ್ಟ್ರೆಚರ್ ನಲ್ಲಿ ಅವರನ್ನು ಕರೆದುಕೊಂಡು ಹೋದರು. ಮುಂದೊಂದು ದಿನ ಧೋನಿ ಬೆಡ್ ಮೇಲೆ ಮಲಗಿಯೇ ಇದ್ದರು.
ಆದರೆ ಢಾಕಾ ತಲುಪಿದ ನನಗೆ ಧೋನಿ ನೋಡಿ ಚಿಂತೆಯಾಗಿತ್ತು. ಅವರಿಗೆ ಏಳಲೂ ಆಗುತ್ತಿರಲಿಲ್ಲ. ಹೀಗಾಗಿ ಬದಲಿ ವಿಕೆಟ್ ಕೀಪರ್ ಆಗಿ ಪಾರ್ಥಿವ್ ಪಟೇಲ್ ರನ್ನು ಕರೆಸಿಕೊಂಡಿದ್ದೆವು. ಆದರೆ ಧೋನಿ ನಾನು ಆಡುತ್ತೇನೆ ಎನ್ನುತ್ತಿದ್ದರು. ಅವರ ಪರಿಸ್ಥಿತಿ ನೋಡಿದರೆ ಅವರಿಗೆ ನಡೆಯಲೂ ಆಗುತ್ತಿರಲಿಲ್ಲ. ಇನ್ನು ಆಡುವುದು ಎಲ್ಲಿಂದ ಬಂತು ಎಂದುಕೊಂಡೆ.
ಆದರೆ ಪಂದ್ಯದ ದಿನ ನೋವಿನಲ್ಲಿಯೂ ಪ್ಯಾಡ್ ಕಟ್ಟಿಕೊಂಡು ಪಂದ್ಯಕ್ಕೆ ರೆಡಿಯಾದರು. ನಾನು ಅವರನ್ನು ಕೇಳಿದಾಗ ಅವರು ‘ಯಾಕೆ ಅಷ್ಟೊಂದು ಚಿಂತೆ ಮಾಡುತ್ತೀರಿ? ಪಾಕಿಸ್ತಾನದ ವಿರುದ್ಧ ಪಂದ್ಯವೆಂದರೆ ಒಂದು ಕಾಲು ಮುರಿದಿದ್ದರೂ ಆಡುತ್ತೇನೆ’ ಎಂದು ಮೈದಾನಕ್ಕೆ ಇಳಿದೇ ಬಿಟ್ಟರು. ಆ ಪಂದ್ಯವನ್ನು ಗೆಲ್ಲಿಸಿಯೂ ಬಿಟ್ಟರು. ಇದು ಧೋನಿ ವೃತ್ತಿಪರತೆಗೆ ಸಾಕ್ಷಿ ಎಂದು ಪ್ರಸಾದ್ ಸ್ಮರಿಸಿಕೊಂಡಿದ್ದಾರೆ.