ನವದೆಹಲಿ: ಇಂದು ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ನಿರ್ಮಲಾ ಪಾಲಿನ 7 ನೇ ಬಜೆಟ್ ಆಗಿದ್ದು ಸತತ ಏಳು ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆಯ ಸಮಯದ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದು ಇಲ್ಲಿದೆ ನೋಡಿ.
ಕೇಂದ್ರ ಬಜೆಟ್ ಮೊದಲೆಲ್ಲಾ ಬೆಳಿಗ್ಗೆ 11 ಗಂಟೆಗೆ ಮಂಡನೆಯಾಗುತ್ತಿರಲಿಲ್ಲ. ಇದು ಕಳೆದ 20 ವರ್ಷಗಳಿಂದೀಚೆಗೆ ನಡೆದುಕೊಂಡು ಬಂದ ಸಂಪ್ರದಾಯವಷ್ಟೇ. ಅದಕ್ಕಿಂತ ಮೊದಲು ಕೇಂದ್ರ ಬಜೆಟ್ ನ್ನು ಭಾರತೀಯ ಸಮಯದ ಪ್ರಕಾರ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು.
ಆದರೆ ಇದು ಬ್ರಿಟಿಷ್ ಪದ್ಧತಿಯಾಗಿತ್ತು. ಪ್ರತೀ ವರ್ಷ ಫೆಬ್ರವರಿ ತಿಂಗಳ ಕೊನೆಯ ದಿನ ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಎಂದು ನಿಗದಿಯಾಗಿತ್ತು. ಬ್ರಿಟಿಷ್ ಕಾಲದ ಪದ್ಧತಿಯಂತೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಯ ನಿಗದಿ ಮಾಡಲಾಗಿತ್ತು. ಅಂದರೆ ಬ್ರಿಟಿಷ್ ಸಮಯಕ್ಕಿಂತ ಭಾರತದ ಸಮಯ 4 ಗಂಟೆ 30 ನಿಮಿಷದಷ್ಟು ಮುಂದಿದೆ. ಹೀಗಾಗಿ ಲಂಡನ್ ನಲ್ಲಿ ಹಗಲು ಹೊತ್ತು ಬರುವಂತೆ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು.
ಆದರೆ ಈ ಬ್ರಿಟಿಷ್ ಗುಲಾಮಗಿರಿ ಸಂಪ್ರದಾಯ ಮುರಿದಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ. 1999 ರಲ್ಲಿ ವಾಜಪೇಯಿ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಯಶ್ವಂತ್ ಸಿನ್ಹಾ ಮೊದಲ ಬಾರಿಗೆ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಿದರು. ಅದಾದ ಬಳಿಕ ಬ್ರಿಟಿಷ್ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ನಮ್ಮದೇ ಸಮಯಕ್ಕೆ ಅನುಗುಣವಾಗಿ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡುವ ಸಂಪ್ರದಾಯ ಮುಂದುವರಿಯಿತು.