ಕ್ರಿಸ್ಟ್ ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರೊಂದಿಗೆ ಜಟಾಪಟಿ ನಡೆಸಿದ ಘಟನೆ ವರದಿಯಾಗಿದೆ.
ದ್ವಿತೀಯ ಟೆಸ್ಟ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೊಹ್ಲಿ ಎರಡನೇ ದಿನದಾಟದ ವೇಳೆ ಪ್ರೇಕ್ಷಕರ ಕಡೆಗೆ ಬೆರಳು ಸನ್ನೆ ಮಾಡಿ ಆಕ್ರಮಣಕಾರಿ ವರ್ತನೆ ಮಾಡಿದ್ದರ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದಾಗ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ.
ನಾಯಕರಾಗಿ ನೀವು ಇತರರಿಗೆ ಮಾದರಿಯಾಗಬೇಕಿತ್ತು. ಅದರ ಬದಲು ಈ ರೀತಿ ವರ್ತಿಸಿದ್ದು ಸರಿಯಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಕೊಹ್ಲಿ ಸಿಟ್ಟಿಗೆದ್ದು ಅವರ ಜತೆಯೇ ವಾಗ್ವಾದಕ್ಕಿಳಿದಿದ್ದಾರೆ.
ಮೊದಲಿಗೆ ನಿಮಗೆ ಏನು ಅನಿಸುತ್ತದೆ ಎಂದು ಮೊದಲಿಗೆ ಪತ್ರಕರ್ತನಿಗೆ ಕೊಹ್ಲಿ ಮರುಪ್ರಶ್ನಿಸಿದರು. ಅದಕ್ಕೇ ಪತ್ರಕರ್ತ ನಾನು ನಿಮ್ಮ ನಿಮಗೆ ಪ್ರಶ್ನೆ ಕೇಳಿದೆ ಎಂದಿದ್ದಾರೆ. ಇದಕ್ಕೆ ಕೊಹ್ಲಿ ಮತ್ತೆ ನಾನು ನಿಮ್ಮ ಉತ್ತರ ಕೇಳುತ್ತಿದ್ದೇನೆ ಎಂದರು. ನೀವು ಇತರರಿಗೆ ಮಾದರಿಯಾಗಬೇಕಿತ್ತು ಎಂದು ಪತ್ರಕರ್ತರು ಹೇಳಿದ್ದಾರೆ.
ಇದಕ್ಕೆ ಸಿಟ್ಟಿಗೆದ್ದ ಕೊಹ್ಲಿ ‘ನೀವು ನಿಜವಾಗಿ ಏನು ನಡೆದಿತ್ತು ಎಂದು ತಿಳಿದುಕೊಂಡು ಸರಿಯಾದ ಪ್ರಶ್ನೆ ಕೇಳಲು ತಯಾರಾಗಿ ಬನ್ನಿ. ಅರ್ದಂಬರ್ಧ ತಿಳಿದುಕೊಂಡು ಬರಬೇಡಿ. ಒಂದು ವೇಳೆ ನಿಮಗೆ ವಿವಾದ ಹುಟ್ಟುಹಾಕಬೇಕಾದರೆ ಇದು ಅದಕ್ಕೆ ಸೂಕ್ತ ಜಾಗವಲ್ಲ. ನಾನು ಮ್ಯಾಚ್ ರೆಫರಿ ಜತೆ ಮಾತನಾಡಿದ್ದೇನೆ. ಅವರಿಗೆ ಇದರ ಬಗ್ಗೆ ತಕರಾರು ಇಲ್ಲ’ ಎಂದು ಆಕ್ರೋಶದಿಂದಲೇ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಪತ್ರಕರ್ತರು ಕೇಳಿದ ಬೇರೆ ಪ್ರಶ್ನೆಗಳಿಗೂ ಕೊಹ್ಲಿ ವ್ಯಗ್ರರಾಗಿಯೇ ಉತ್ತರಿಸಿದ್ದಾರೆ.