ದುಬೈ: ದೀಪಾವಳಿ ಬಂತೆಂದರೆ ಸಾಕು, ಪಟಾಕಿ ಸಿಡಿಸುವ ಬಗ್ಗೆ ಪರ-ವಿರೋಧ ವಾದಗಳು ಶುರುವಾಗುತ್ತವೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅರ್ಥಪೂರ್ಣ ದೀಪಾವಳಿ ಆಚರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಟಿಪ್ಸ್ ಕೊಡುತ್ತೇನೆ ಎಂದು ಜಾಹೀರಾತೊಂದನ್ನು ನೀಡಿದ್ದು ಟ್ರೋಲ್ ಗೊಳಗಾಗಿದ್ದಾರೆ.
ಕಳೆದ ಬಾರಿಯೂ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಪಟಾಕಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಟ್ರೋಲ್ ಗೊಳಗಾಗಿದ್ದರು. ಕ್ರಿಕೆಟ್ ನಲ್ಲಿ ಗೆದ್ದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರೆ ತಪ್ಪಲ್ಲವೇ ಎಂದು ನೆಟ್ಟಿಗರು ಕೊಹ್ಲಿಯನ್ನು ಪ್ರಶ್ನೆ ಮಾಡಿದ್ದರು.
ಈ ಬಾರಿ ದೀಪಾವಳಿ ಒಂದು ವಾರ ಬಾಕಿಯಿರುವಾಗಲೇ ಕೊಹ್ಲಿ ಅರ್ಥಪೂರ್ಣ ದೀಪಾವಳಿ ಬಗ್ಗೆ ಮಾತನಾಡಿದ್ದಕ್ಕೆ ಟ್ರೋಲ್ ಗೊಳಗಾಗಿದ್ದಾರೆ. ಕೊಹ್ಲಿ ಹಿಂದೆ ತಮ್ಮ ಐಷಾರಾಮಿ ಕಾರು ತೊಳೆಯಲು ಕುಡಿಯುವ ನೀರು ಬಳಸಿದ್ದಕ್ಕೆ ಮಹಾನಗರ ಪಾಲಿಕೆಯಿಂದ ದಂಡ ಹಾಕಿಸಿಕೊಂಡಿದ್ದನ್ನು ಕೆಲವರು ನೆನಪಿಸಿದ್ದಾರೆ.