ಬೆಂಗಳೂರು: ಬೆಂಗಳೂರು ವಿರಾಟ್ ಕೊಹ್ಲಿ ಪಾಲಿಗೆ ಎರಡನೇ ತವರಿದ್ದಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಕೊಹ್ಲಿ ಇಲ್ಲಿ ಟೀಂ ಇಂಡಿಯಾ ಪರ ಆಡುತ್ತಿದ್ದರೂ ಜನ ತಮ್ಮ ಪ್ರೀತಿ ತೋರಿಸುವುದನ್ನು ಮರೆಯುವುದಿಲ್ಲ.
ಭಾರತ ಮತ್ತು ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿಯೂ ಇಂತಹದ್ದೇ ಘಟನೆಯಾಗಿದೆ. ನಿನ್ನೆ ಕೊಹ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗಿಳಿದಾಗ ಅಭಿಮಾನಿಗಳು ಜೋರಾಗಿ ಅವರ ಹೆಸರೆತ್ತಿ ತಮ್ಮ ಸಂತೋಷ ಹೊರಹಾಕಿದ್ದರು.
ಬಳಿಕ ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಮತ್ತು ಪ್ರೇಕ್ಷಕರ ನಡುವಿನ ಆಟ ನೋಡುವುದೇ ತಮಾಷೆಯಾಗಿತ್ತು. ಅಭಿಮಾನಿಗಳು ಆರ್ ಸಿಬಿ ಎಂದು ಕೂಗಿದ್ದಕ್ಕೆ ಕೊಹ್ಲಿ ತಮ್ಮ ಜೆರ್ಸಿ ಒಳಗೆ ಹಾಕಿದ್ದ ಕೆಂಪು ಬಣ್ಣದ ಬನಿಯನ್ ತೋರಿಸಿದ್ದರು. ಕೊಹ್ಲಿ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಅಭಿಮಾನಿಗಳು ಬೇಕೆಂದೇ ಎಬಿಡಿ ವಿಲಿಯರ್ಸ್ ಹೆಸರು ಕೂಗಿ ಕರೆದಾಗ ಎಬಿಡಿ ಶೈಲಿಯಲ್ಲಿ ಬ್ಯಾಟ್ ಬೀಸುವಂತೆ ಆಕ್ಷನ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಅಷ್ಟೇ ಅಲ್ಲ, ಪದೇ ಪದೇ ಅಭಿಮಾನಿಗಳತ್ತ ತಿರುಗಿ ಆಟಗಾರರನ್ನು ಜೋರಾಗಿ ಹುರಿದುಂಬಿಸುವಂತೆ ಸನ್ನೆ ಮಾಡುತ್ತಲೇ ಇದ್ದರು. ಅಂತೂ ಚಿನ್ನಸ್ವಾಮಿ ಅಂಗಣದಲ್ಲಿ ಕೊಹ್ಲಿ ಮತ್ತು ಅಭಿಮಾನಿಗಳ ಜೊತೆಯಾಟ ನೋಡುವುದೇ ಸ್ವಾರಸ್ಯಕರವಾಗಿತ್ತು.