ಮುಂಬೈ: ವಿರಾಟ್ ಕೊಹ್ಲಿ ಇಂದು ವಿಶ್ವದ ಘಟಾನುಘಟಿ ಬ್ಯಾಟಿಗನಾಗಿರಬಹುದು. ಆದರೆ ಒಂದು ಕಾಲದಲ್ಲಿ ರನ್ ಗಳಿಸದೇ ಇದ್ದಾಗ ತಂಡದಿಂದ ಕಿತ್ತು ಹಾಕಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ!
ಇಂದು ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವದಿಂದ ಎದುರಾಳಿಗಳನ್ನು ಕೆಣಕುವ ಕೊಹ್ಲಿ ಹಿಂದೆ ಭಾವನಾತ್ಮಕವಾಗಿ ಎಷ್ಟು ದುರ್ಬಲರಾಗಿದ್ದರು ಎಂಬುದನ್ನು ಅವರ ಅಂಡರ್ 17 ಸಹ ಆಟಗಾರ ಪ್ರದೀಪ್ ಸಾಂಗ್ವನ್ ಬಹಿರಂಗಪಡಿಸಿದ್ದಾರೆ.
ಹಿಂದೊಮ್ಮೆ ಪಂಜಾಬ್ ನಲ್ಲಿ ಅಂಡರ್ 17 ಪರ ಆಡುತ್ತಿದ್ದಾಗ ಕೊಹ್ಲಿಯನ್ನು ಎರಡು ಇನಿಂಗ್ಸ್ ಗಳಲ್ಲಿ ರನ್ ಗಳಿಸಲಿಲ್ಲ ಎಂಬ ಕಾರಣಕ್ಕೆ ಅಂದಿನ ಕೋಚ್ ಪ್ರಾಂಕ್ ಮಾಡಲು ಬೇಕೆಂದೇ ಮುಂದಿನ ಪಂದ್ಯದ ಆಡುವ ಬಳಗದಿಂದ ಕೊಹ್ಲಿಯ ಹೆಸರು ಕೈ ಬಿಟ್ಟಿದ್ದರಂತೆ.
ಇದರಿಂದ ಕೊಹ್ಲಿ ಎಷ್ಟು ಆಘಾತಕ್ಕೊಳಗಾದರು ಎಂದರೆ ಕೊಠಡಿಗೆ ಹೋಗಿ ಮನಸಾರೆ ಅತ್ತಿದ್ದಲ್ಲದೆ, ತಮ್ಮ ಬಾಲ್ಯದ ಕೋಚ್ ರಾಜ್ ಕುಮಾರ್ ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರಂತೆ. ಅಲ್ಲದೆ ಪ್ರದೀಪ್ ಬಳಿ ಬಂದು ಇದು ಅನ್ಯಾಯ ಅಲ್ವಾ ಎಂದು ಬೇಸರ ಹೊರಹಾಕಿದ್ದರಂತೆ. ನಾನು ಆಡದೇ ಇದ್ದರೆ ನಿದ್ರೆಯೂ ಮಾಡಲ್ಲ ಎಂದು ಹಠ ಹಿಡಿದರಂತೆ. ಆಗ ಪ್ರದೀಪ್ ಇದೆಲ್ಲಾ ಪ್ರಾಂಕ್ ಆಗಿತ್ತು, ನೀನು ಮುಂದಿನ ಪಂದ್ಯದಲ್ಲಿ ಆಡುತ್ತಿದ್ದೀಯಾ ಎಂದು ಸಮಾಧಾನಿಸಿದರಂತೆ.