ಆಂಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಗೆದ್ದು ಪ್ರವಾಸದಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 203 ರನ್ ಗಳ ಗುರಿ ನೀಡಿತ್ತು. 204 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ನಷ್ಟವಾದರೂ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅಬ್ಬರದ ಆಟವಾಡಿದ ರಾಹುಲ್ 27 ಎಸೆತಗಳಲ್ಲಿ 56 ರನ್ ಗಳಿಸಿದರೆ ನಾಯಕ ಕೊಹ್ಲಿ 32 ಎಸೆತಗಳಲ್ಲಿ 45 ರನ್ ಗಳಿಸಿ ರನ್ ರೇಟ್ ಕಾಯ್ದುಕೊಳ್ಳಲು ನೆರವಾದರು.
ಈ ಉತ್ತಮ ಅಡಿಪಾಯದ ಬಳಿಕ ರಾಹುಲ್, ಕೊಹ್ಲಿ ಬೆನ್ನು ಬೆನ್ನಿಗೆ ವಿಕೆಟ್ ಒಪ್ಪಿಸಿದರೂ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅದನ್ನು ಹಾಳು ಮಾಡಲು ಬಿಡಲಿಲ್ಲ. ಇಡೀ ಇನಿಂಗ್ಸ್ ನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ಅಯ್ಯರ್ 29 ಎಸೆತಗಳಲ್ಲಿ 3 ಸಿಕ್ಸರ್ ಗಳ ಸಹಿತ 58 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭಾರತಕ್ಕೆ ಗೆಲುವು ಕೊಡಿಸಿಯೇ ಬಿಟ್ಟರು. ಮನೀಶ್ ಪಾಂಡೆ ಔಟಾಗದೇ 14 ರನ್ ಗಳಿಸಿದರೆ ಶಿವಂ ದುಬೆ 13 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.